ಬೆಂಗಳೂರು, ಸೆ.11- ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಹರಡುತ್ತಿರುವ ವದಂತಿಗಳಿಗೆ ಪಕ್ಷದ ಶಾಸಕರು ಕಿವಿಗೊಡಬಾರದು ಎಂದು ಜೆಡಿಎಸ್ ವರಿಷ್ಠರು ಸಲಹೆ ಮಾಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ತಲೆದೋರುವುದು ಸಹಜ. ಆಗಾಗ್ಗೆ ಉಭಯ ಪಕ್ಷಗಳ ನಾಯಕರು ಪರಿಹರಿಸಿಕೊಳ್ಳಲಿದ್ದಾರೆ. ಹೀಗಾಗಿ ರಾಜಕೀಯವಾಗಿ ಕೇಳಿಬರುತ್ತಿರುವ ಊಹಾಪೆÇೀಹಗಳಿಗೆ ಮನ್ನಣೆ ನೀಡಬಾರದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಕ್ಷದ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ.
ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾದರೂ ಮುಕ್ತವಾಗಿ ಸಮಾಲೋಚಿಸುವ ಮೂಲಕ ಪರಿಹರಿಸೋಣ. ಸಮ್ಮಿಶ್ರ ಸರ್ಕಾರದಲ್ಲಿ ಸಮಸ್ಯೆಗಳು ಉಂಟಾಗುವುದು ಸಹಜ. ಕೆಲವು ಶಾಸಕರ ಕ್ಷೇತ್ರಗಳಲ್ಲಿ ಸುಗಮವಾಗಿ ಕೆಲಸ ಕಾರ್ಯಗಳು ಆಗದಿರುವ ಬಗ್ಗೆಯೂ ಮಾಹಿತಿ ಇದೆ. ತಾಳ್ಮೆ ಯಿಂದ ಇದ್ದರೆ ಎಲ್ಲವನ್ನೂ ಸರಿಪಡಿಸಿಕೊಳ್ಳಬಹುದು ಎಂದು ಅಸಮಾಧಾನಗೊಂಡಿದ್ದ ಕೆಲವು ಶಾಸಕರನ್ನು ಸಮಾಧಾನ ಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ನಲ್ಲಿ ಉಂಟಾಗಿರುವ ಆಂತರಿಕ ಭಿನ್ನಮತವನ್ನು ಆ ಪಕ್ಷವೇ ಪರಿಹರಿಸಿಕೊಳ್ಳಲಿದೆ. ಕಾಂಗ್ರೆಸ್ ಭಿನ್ನಮತದಿಂದ ಸರ್ಕಾರಕ್ಕೆ ಧಕ್ಕೆಯಾಗಲಿದೆ ಎಂಬ ಯಾವುದೇ ರೀತಿಯ ಅನುಮಾನಕ್ಕೆ ಆಸ್ಪದ ಕೊಡಬೇಡಿ, ಏನೇ ಅಡ್ಡಿ ಆತಂಕಗಳಿದ್ದರೂ ಬಹಿರಂಗ ಚರ್ಚೆ ಮಾಡುವುದು ಬೇಡ, ವರಿಷ್ಠರ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂಬ ಸಲಹೆ ಮಾಡಿದ್ದಾರೆ.
ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರುಗಳ ನೇಮಕ ವಿಚಾರದಲ್ಲಿ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ನಿಂದ ಸಹಮತ ವ್ಯಕ್ತವಾದ ಕೂಡಲೇ ನಮ್ಮ ಪಕ್ಷದ ಕೆಲವರಿಗೆ ಅವಕಾಶ ಕಲ್ಪಿಸಲಾಗುವುದು. ಯಾವುದಕ್ಕೂ ಆತುರ ಪಡುವುದು ಬೇಡ ಎಂದು ಹಿತೋಪದೇಶ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ರಾಜಕೀಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದೆ. ಪರಿಸ್ಥಿತಿಯ ಲಾಭ ಪಡೆಯಲು ವಿರೋಧ ಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬಾರದು, ಅಸಮಾಧಾನಗೊಂಡ ಶಾಸಕರನ್ನೇ ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇದೆ. ಯಾವುದೇ ವಿಚಾರದಲ್ಲೂ ಎಚ್ಚರಿಕೆಯಿಂದ ಇರುವುದು ಸೂಕ್ತ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಅವರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.