ಬೆಂಗಳೂರು, ಸೆ.11- ಸರ್ಕಾರ ವಿವಿಧ ದರ್ಜೆಯ ಸಿಬ್ಬಂದಿ ಮತ್ತು ಅಧಿಕಾರಿ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಿದ್ದು, ಅವುಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಸಂಪತ್ತು, ವನ್ಯ ಜೀವಿ ಸಂರಕ್ಷಣೆಗಾಗಿ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಲಾಗುವುದು ಎಂದು ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದ್ದಾರೆ.
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳಲ್ಲಿ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅಸಮಾನ್ಯ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಸರ್ಕಾರದಿಂದ ಪ್ರಶಸ್ತಿ ನೀಡಲಾಗುತ್ತಿದೆ. ಕರ್ತವ್ಯ ನಿರತವಾಗಿದ್ದ ವೇಳೆ ಸಂಕಷ್ಟ ಸ್ಥಿತಿಯನ್ನು ಎದುರಿಸುವ ಸಂದರ್ಭದಲ್ಲಿ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳು ಮೃತರಾದರೆ ಅವರ ಕುಟುಂಬಕ್ಕೆ 20 ಲಕ್ಷ , ಶಾಶ್ವತ ಅಂಗವಿಕಲರಾದರೆ 10 ಲಕ್ಷ, ಗಂಭೀರ ಸ್ವರೂಪದ ವಾಗ್ದಾಳಿಗಳಾದರೆ 2 ಲಕ್ಷ ಪರಿಹಾರ ನೀಡುವ ಜತೆಗೆ ವಿಶೇಷ ಗುಂಪು ವಿಮಾ ಮತ್ತು ಗಡಿ ವಿಮೆಯಡಿ 10 ಲಕ್ಷ ಪರಿಹಾರ ನೀಡಲು ಸರ್ಕಾರ ಆದೇಶಿಸಿದೆ ಎಂದರು.
ಒಟ್ಟು 3085ವಿವಿಧ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಲಾಗಿದ್ದು, 2019-20ನೇ ಸಾಲಿನಿಂದ ಈ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 43,38,276 ಹೆಕ್ಟರ್ ಪ್ರದೇಶವಿದ್ದು, ಭೌಗೋಳಿಕ ಪ್ರದೇಶದ ಶೇ.22.62ರಷ್ಟು ಪ್ರದೇಶ ಮಾತ್ರ ಅರಣ್ಯವಾಗಿದೆ. ಅರಣ್ಯಾಭಿವೃದ್ದಿ ಮತ್ತು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಮುಖ್ಯಕಾರ್ಯದರ್ಶಿ ಡಾ.ಸಂದೀಪ್ ದವೆ, ಅರಣ್ಯ ಸಂರಕ್ಷಣಾಧಿಕಾರಿ ಪುನಾದಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.






