ಬೆಂಗಳೂರು, ಸೆ.11- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಬಿಜೆಪಿಯವರು ಕಾಣುತ್ತಿರುವ ಕನಸು ಈಡೇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ತಿರುಗೇಟು ನೀಡಿದ್ದಾರೆ.ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ ಬಂಡಾಯದ ಕಹಳೆ ಊದಿರುವ ಸಚಿವ ರಮೇಶ್ ಜಾರಕಿಹೊಳಿ ಜತೆ ಚರ್ಚೆ ನಡೆಸಿದ ಬಳಿಕ ದಿನೇಶ್ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರವನ್ನು ಪಥನಗೊಳಿಸಲು ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ. ಕುದುರೆ ವ್ಯಾಪಾರ ಮಾಡಿ ಅನೈತಿಕ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಆತುರ ತೋರಿಸುತ್ತಿದ್ದಾರೆ. ಆದರೆ, ನಾವು ಬಿಜೆಪಿಯವರ ಮಟ್ಟಕ್ಕಿಳಿಯುವುದಿಲ್ಲ ಎಂದರು.
ನಮ್ಮ ಶಾಸಕರಿಗೆ ಏನೆಲ್ಲಾ ಆಮಿಷಗಳನ್ನು ಒಡ್ಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರ ಆಮಿಷಗಳನ್ನು ನಮ್ಮ ಶಾಸಕರು ತಿರಸ್ಕರಿಸಿದ್ದಾರೆ. ಯಾರೂ ಕಾಂಗ್ರೆಸ್ ತೊರೆಯುವುದಿಲ್ಲ. ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಹಾಗೂ ನಾನು ಎಲ್ಲರೂ ಒಟ್ಟಾಗಿದ್ದೇವೆ. ಯಾವುದೇ ಅಸಮಾಧಾನಗಳಾಗಲಿ, ಭಿನ್ನಮತಗಳಾಗಲಿ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಜನರು ರಮೇಶ್ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎಂದು ಕೂಗಿದ್ದಾರೆ. ಅದಕ್ಕೆ ನಾನು ಬೇಡ, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಗಲಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅದನ್ನು ತಿರುಚಿ ಸಮ್ಮಿಶ್ರ ಸರ್ಕಾರವನ್ನು ಪಥನ ಮಾಡಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ಅಪ್ಪಟ್ಟ ಸುಳ್ಳು ಎಂದು ಹೇಳಿದರು.
ಅಸಮಾಧಾನಗೊಂಡಿರುವ ಜಾರಕಿಹೊಳಿ ಸಹೋದರರನ್ನು ಮನವೊಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್ಗುಂಡೂರಾವ್ ಅವರು, ಅಸಮಾಧಾನವೇ ಇಲ್ಲ. ಇನ್ನು ಮನವೊಲಿಕೆಯ ಮಾತೆಲ್ಲಿ ಎಂದು ಮರು ಪ್ರಶ್ನೆ ಹಾಕಿದರು.
ರಮೇಶ್ ಜಾರಕಿಹೊಳಿ ಐದು ಬಾರಿ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ನಾನು ಕಾಂಗ್ರೆಸ್ ಬಿಡುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹಾಗಿದ್ದರೂ ಬಿಜೆಪಿಯವರು ಹಗಲು ಕನಸು ಕಾಣುತ್ತಾ ಸುಳ್ಳು ಸುದ್ದಿಗಳನ್ನು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಸುಳ್ಳು ವದಂತಿ. ಅವರು ಯಾವುದೇ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಜಿಲ್ಲೆಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ದಾರೆ. ನಾವು ಅವರಿಗೆ ಸಮಜಾಯಿಷಿ ನೀಡಿದ್ದೇವೆ. ಎಲ್ಲವೂ ಬಗೆಹರಿದಿದೆ ಎಂದು ದಿನೇಶ್ಗುಂಡೂರಾವ್ ಹೇಳಿದರು.