ಬೆಂಗಳೂರು, ಸೆ.11-ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ಕಳೆದ ರಾತ್ರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಶ್ರೀರಾಮುಲು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಕಳೆದ ರಾತ್ರಿ ಜಾರಕಿ ಹೊಳಿ ಅವರ ನಿವಾಸದಲ್ಲಿ ಶ್ರೀರಾಮುಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಹಸ್ಯವಾಗಿ ಮಾತುಕತೆ ನಡೆಸಿದ್ದು, ವದಂತಿಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಬಂದಿದೆ.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಅಧಿಕಾರ ಹಿಡಿಯಲು ಶತಪ್ರಯತ್ನ ನಡೆಸುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹಬ್ಬಿರುವಾಗಲೇ ಉಭಯ ನಾಯಕರ ಭೇಟಿ ಇದನ್ನು ಪುಷ್ಟೀಕರಿಸುವಂತಿದೆ.
ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಸೂಚನೆ ಮೇರೆಗೆ ಶ್ರೀರಾಮುಲು, ರಮೇಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿರುವ ಸುಮಾರು 14 ಶಾಸಕರನ್ನು ಬಿಜೆಪಿಗೆ ಕರೆತರುವ ಹೊಣೆಗಾರಿಕೆಯನ್ನು ರಮೇಶ್ ಜಾರಕಿಹೊಳಿಗೆ ನೀಡಲಾಗಿದೆ. ಅಸಮಾಧಾನಗೊಂಡಿರುವ ಶಾಸಕರು ಪಕ್ಷಕ್ಕೆ ಬಂದರೆ ಎಲ್ಲ ರೀತಿಯ ಸ್ಥಾನಮಾನ ಕಲ್ಪಿಸುವ ಭರವಸೆ ಸಿಕ್ಕಿದೆ ಎನ್ನಲಾಗುತ್ತಿದೆ.
ಉಪಮುಖ್ಯಮಂತ್ರಿ ಸ್ಥಾನ:
ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಮಾತುಕತೆ ಸಂದರ್ಭದಲ್ಲಿ ಬಿಜೆಪಿಗೆ ಬಂದರೆ ಸಹೋದರ ಸತೀಶ್ ಜಾರಕಿ ಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ, ರಮೇಶ್ ಜಾರಕಿ ಹೊಳಿಗೆ ಜಲಸಂಪನ್ಮೂಲ ಖಾತೆ ಹಾಗೂ ಕೆಲವು ಶಾಸಕರಿಗೆ ಸಂಪುಟದಲ್ಲೂ ಸೂಕ್ತವಾದ ಖಾತೆಗಳನ್ನೇ ನೀಡುವ ಭರವಸೆಯನ್ನು ನೀಡಲಾಗಿದೆ.
ರಾಜ್ಯದಲ್ಲಿ ಈವರೆಗೂ ವಾಲ್ಮೀಕಿ ಸಮುದಾಯದಿಂದ ಯಾರೊಬ್ಬರೂ ಉನ್ನತ ಸ್ಥಾನಕ್ಕೇರಿಲ್ಲ. ಇದೀಗ ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶ ಬಂದಿದೆ. ಇದನ್ನು ತಪ್ಪಿಸಿಕೊಂಡರೆ ಪುನಃ ಇಂತಹ ಸಂದರ್ಭ ಬರುವುದಿಲ್ಲ ಎಂದು ಶ್ರೀರಾಮುಲು ಜಾರಕಿ ಹೊಳಿಗೆ ಮನವಿ ಮಾಡಿದ್ದಾರೆ.
ಮೂರು ದಿನಗಳ ಕಾಲ ರಾಜ್ಯ ಕೈ ನಾಯಕರ ಸಂಪರ್ಕಕ್ಕೆ ಸಿಗದೇ ಅಜ್ಞಾತ ಸ್ಥಳದಲ್ಲಿದ್ದ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಪಕ್ಷ ಬಿಡುವ ಸಂಬಂಧ ಎಲ್ಲಾ ಶಾಸಕರ ಜೊತೆ ಚರ್ಚಿಸಿ ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗಿದೆ. ಇದು ಭವಿಷ್ಯವನ್ನು ತೀರ್ಮಾನಿಸುವ ವಿಷಯವಾಗಿರುವುದರಿಂದ ತಕ್ಷಣವೇ ನಿರ್ಧಾರ ಪ್ರಕಟಿಸಲು ಸಾಧ್ಯವಿಲ್ಲ ಎಂದು ರಮೇಶ್ ಜಾರಕಿ ಹೊಳಿ ಶ್ರೀರಾಮುಲುಗೆ ಹೇಳಿರುವುದಾಗಿ ತಿಳಿದುಬಂದಿದೆ.
14 ಶಾಸಕರಿಗೆ ಗಾಳ:
ಜಾರಕಿಹೊಳಿ ಸಹೋದರರ ಜೊತೆಗೆ ಈಗಾಗಲೇ 14ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಿದ್ದು ಎಲ್ಲರನ್ನೂ ಕರೆದುಕೊಂಡು ಬಿಜೆಪಿಗೆ ಹಾರಲು ಜಾರಿಕಹೊಳಿ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ಹರಡಿದೆ.
ಬೆಳಗಾವಿ ಸಹೋದರರ ಆಟಾಟೋಪಗಳಿಂದ ಬೇಸತ್ತಿರುವ ಕಾಂಗ್ರೆಸ್ ಹೈಕಮಾಂಡ್ ಇಬ್ಬರಿಗೂ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಆದರೆ ರಮೇಶ ಜಾರಕೊಹೊಳಿ ಅವರು ಅದಕ್ಕೆಲ್ಲಾ ಸೊಪ್ಪು ಹಾಕಿಲ್ಲ.
ಪಿಎಲ್ಡಿ ಬ್ಯಾಂಕ್ ವಿಷಯದಲ್ಲಿ ಅವಮಾನ:
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ ಜಾರಕಿಹೊಳಿ ನಡುವೆ ಗೊಂದಲ ಉಂಟಾದ ಸಂದರ್ಭದಲ್ಲಿ, ಸತೀಶ್ಗೆ ಅವಮಾನವಾದರೆ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪಕ್ಷ ಬಿಡುವ ಎಚ್ಚರಿಕೆ ರಮೇಶ ಜಾರಕಿಹೊಳಿ ಈ ಹಿಂದೆಯೇ ನೀಡಿದ್ದರು.
ಸಚಿವ ರಮೇಶ ಜಾರಕಿಹೊಳಿ, ಅಥಣಿಯ ಕಾಂಗ್ರೆಸ್ ಶಾಸಕ ಮಹೇಶ ಕಮಡೊಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರುಗಳು ಬಿಜೆಪಿ ಸೇರುತ್ತಿದ್ದಾರೆ ಎನ್ನಲಾಗಿದೆ. ಇವರ ಜೊತೆಗೆ ಇನ್ನೂ ಕೆಲವು ಶಾಸಕರು ಬಿಜೆಪಿ ಸೇರುತ್ತಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿದೆ.
ಜಾರಕಿಹೊಳಿ ಸಹೋದರರು ಬಿಜೆಪಿಗೆ ಹಾರಿದರೆ ಉತ್ತರ ಕರ್ನಾಟಕದಲ್ಲಿ ಬಿಜೆಪಿ ತನ್ನ ಪ್ರಮುಖ ನಾಯಕರನ್ನು ಕಳೆದುಕೊಂಡಂತಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಸರ್ಕಾರವೇ ಉರುಳುತ್ತದೆ. ಡಿ.ಕೆ.ಶಿವಕುಮಾರ್ ಸಹ ಈಗ ಐಟಿ ಕೂಪದಲ್ಲಿ ಸಿಲುಕಿಕೊಂಡಿದ್ದು ಅವರು ರಾಜ್ಯ ರಾಜಕರಣದಲ್ಲಿ ತಲೆ ಹಾಕುತ್ತಿಲ್ಲ ಎನ್ನಲಾಗಿದೆ.
ಕಳೆದ ವಾರವೇ ಸುಳಿವು!
ಸಚಿವ ಡಿ.ಕೆ. ಶಿವಕುಮಾರ ಅವರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮುಂದಿಟ್ಟುಕೊಂಡು ಜಾರಕಿಹೊಳಿ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆ. ಜಾರಕಿಹೊಳಿ ಕುಟುಂಬದ ಪ್ರಭಾವವನ್ನು ರಾಜಕೀಯವಾಗಿ ಪ್ರಭಾವ ಕುಗ್ಗಿಸಲು ಡಿಕೆಶಿ ಮುಂದಾಗಿದ್ದಾರೆ ಎಂಬ ಅಳಲನ್ನು ಸಚಿವ ಜಾರಕಿಹೊಳಿ ತಮ್ಮ ಆಪ್ತರ ಬಳಿ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ವರ್ಗಾವಣೆ ವಿಚಾರದಲ್ಲಿ ಮೂಗು ತೂರಿಸುವುದು, ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆನ್ನಿಗೆ ನಿಂತಿರುವುದು, ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಬೇಸತ್ತು ಸಚಿವರು ಕಮಲ ಪಾಳಯ ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಮೂಲಕ ಇದೀಗ ಜಾರಕಿಹೊಳಿ ಸಹೋದರರ ನಡೆ ಏನೋ ಎಂಬುದರ ಬಗ್ಗೆ ರಾಜಕಿಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಲಿದೆ. ಇನ್ನು ಅಥಣಿ ಶಾಸಕ ಮಹೇಶ ಕುಂಗಟಳ್ಳಿ ಅವರು ಅಥಣಿಯಲ್ಲಿದ್ದರೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಾಗವಾಡ ಅವರು ಸ್ವಗ್ರಾಮದಲ್ಲಿರುವುದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಯಾರ್ಯಾರಿಗೆ ಗಾಳ:
ವಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ)
ಆನಂದ್ಸಿಂಗ್(ವಿಜಯನಗರ)
ತುಕಾರಾಮ್ (ಸಂಡೂರು)
ಅಮರೇಗೌಡ ಬೈಯ್ಯಾಪುರ (ಕುಷ್ಟಗಿ)
ಪ್ರತಾಪ್ಗೌಡ ಪಾಟೀಲ್ (ಮಸ್ಕಿ)
ನಾರಾಯಣರಾವ್ (ಬಸವಕಲ್ಯಾಣ)
ಶ್ರೀಮಂತ ಪಾಟೀಲ (ಕಾಗವಾಡ)
ನಾಗೇಶ್ (ಮುಳಬಾಗಿಲು)
ಮಹಂತೇಶ್ ಕುಮಟಹಳ್ಳಿ (ಅಥಣಿ)
ಸತೀಶ್ ಜಾರಕಿಹೊಳಿ (ಯಮಕನಮರಡಿ)
ಡಿ.ಎಸ್.ಹುಲಿಗೇರಿ (ಲಿಂಗಸಗೂರು)
ರಮೇಶ್ ಜಾರಕಿ ಹೊಳಿ (ಗೋಕಾಕ್)
ಬಸವನಗೌಡ ದದ್ದಲ್( ರಾಯಚೂರು ಗ್ರಾಮಾಂತರ)