ಜೈಪುರ: ತೈಲ ಬೆಲೆ ಏರಿಕೆ ಖಂಡಿಸಿ ನಡೆಸುತ್ತಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ರಾಜಸ್ಥಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತನ್ನ ಪಾಲಿನ ವ್ಯಾಟ್ ಕಡಿತಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ.
20ಕ್ಕೂ ವಿವಿಧ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಭಾರತ್ ಬಂದ್ ನಡೆಸುತ್ತಿರುವ ನಡುವೆಯೇ ರಾಜಸ್ಥಾನ ಸಿಎಂ ವಸುಂಧರಾ ರಾಜೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ(VAT)ಯನ್ನು ಕಡಿಮೆ ಮಾಡಿ ತಿರುಗೇಟು ನೀಡಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಶೇ. 4ರಷ್ಟು ತೆರಿಗೆಯನ್ನು ಕಡಿಮೆ ಮಾಡಿದ್ದು, ಇದರಿಂದ ಸರಾಸರಿ 2.50 ರೂ. ಅಷ್ಟು ದರ ಕಡಿಮೆ ಆಗಲಿದೆ ಎಂದು ವಸುಂಧರಾ ತಿಳಿಸಿದ್ದಾರೆ.
ತೆರಿಗೆ ಕಡಿತದಿಂದ ಹೆಚ್ಚುವರಿಯಾಗಿ 2,000 ಕೋಟಿ ರೂ. ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಆದರೂ, ನಾವು ತೆರಿಗೆ ಕಡಿತಗೊಳಿಸುವುದರ ಬಗ್ಗೆ ನಿರ್ಧಾರ ಮಾಡಿದ್ದೇವೆ. ಇದರಿಂದ ರಾಜ್ಯದ ಜನರಿಗೆ ಕೊಂಚವಾದರೂ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಇದನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಭಟನೆಗೆ ಅಪಾರ ಬೆಂಬಲ ವ್ಯಕ್ತವಾಗಿರುವುದರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನಾದರೂ ಮಾಡಬೇಕೆಂಬ ಒತ್ತಡದಿಂದ ಹಾಗೂ ಹತಾಶೆಯಿಂದ ಸಿಎಂ ವಸುಂಧರಾ ಅವರು ತೆರಿಗೆಯನ್ನು ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಸಾಲದು ಎಲ್ಪಿಜಿ ಸಿಲಿಂಡರ್ ದರವನ್ನು ಕಡಿಮೆ ಮಾಡಬೇಕೆಂದು ಇದೇ ವೇಳೆ ಒತ್ತಾಯಿಸಿದ್ದಾರೆ.