ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಇಡೀ ದೇಶ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಮೌನ ಮುಂದುವರೆಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಇಂದು ದೇಶದ ಜನ ಬೀದಿಗಿಳಿಯುವಂತಾಗಿದೆ. ತೈಲೋತ್ಪನ್ನಗಳ ದರ ಏರಿಕೆಯಿಂದಾಗಿ ಬೇಸತ್ತ ಜನ ಇಂದು ತಾವೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ತಮ್ಮ ಮೌನ ಮುಂದುವರೆಸಿದ್ದಾರೆ. ದರ ಏರಿಕೆಯಿಂದಾಗಿ ಇಂದು ಜನ ತತ್ತರಿಸಿ ಹೋಗಿದ್ದರೂ ಪ್ರಧಾನಿ ಮೋದಿ ಮಾತ್ರ ಈ ಬಗ್ಗೆ ಬಾಯಿಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಕೋಮು ಗಲಭೆ, ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದರೂ ಪ್ರಧಾನಿ ಮೋದಿ ಮಾತ್ರ ಇನ್ನೂ ತಮ್ಮ ಮೌನ ಮುರಿದಿಲ್ಲ ಎಂದರು.
ಇಂದು ಈ ಸರ್ವಾಧಿಕಾರಿ ಸರ್ಕಾರದ ವಿರುದ್ಧ ವಿಪಕ್ಷಗಳು ಒಗ್ಗೂಡಿದ್ದು, ಭಾರತ್ ಬಂದ್ ನಮ್ಮ ಬಲ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಆಲೋಚಿಸದ ಬಿಜೆಪಿ ಸರ್ಕಾರವನ್ನು ನಾವು ಕಿತ್ತೊಗೆಯಬೇಕಿದೆ. ಮುಂದಿನ ಚುನಾವಣೆಯಲ್ಲಿ ಜನ ತಮ್ಮ ಶಕ್ತಿ ಏನು ಎಂಬುದನ್ನು ಮೋದಿ ಮತ್ತು ಬಿಜೆಪಿಗೆ ತೋರಿಸಿಕೊಡಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ರಾಹುಲ್ ಗಾಂಧಿ ಭಾರತ್ ಬಂದ್ ಹಿನ್ನಲೆಯಲ್ಲಿ ತಮ್ಮ ಯಾತ್ರೆಯನ್ನು ಎರಡು ದಿನ ಮುಂಚಿತವಾಗಿ ಮೊಟಕುಗೊಳಿಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಇಂದು ಬೆಳಿಗ್ಗೆಯೇ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಪಕ್ಷದ ಪ್ರತಿಭಟನಾ ಮೆರವಣಿಗೆಯಲ್ಲೂ ಪಾಲ್ಗೊಂಡು ಬೀದಿಗಿಳಿದು ಹೋರಾಟಕ್ಕೆ ಬೆಂಬಲ ನೀಡಿದರು.
ಬೆಳಗ್ಗೆ ಪಕ್ಷದ ಹಿರಿಯ ಮುಖಂಡರಾದ ಗುಲಾಂನಬಿ ಆಜಾದ್, ಅಶೋಕ್ ಗೆಹ್ಲೋಟ್ ಮತ್ತು ಆನಂದ್ ಶರ್ಮಾ ಅವರೊಂದಿಗೆ ರಾಜ್ ಘಾಟ್ ಗೆ ತೆರಳಿದ್ದ ರಾಹುಲ್ ಅಲ್ಲಿ ಮಹಾತ್ಮಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಅಲ್ಲಿಯೇ ಸಮೀಪವಿದ್ದ ಪೆಟ್ರೋಲ್ ಬಂಕ್ ಗೆ ತೆರಳಿ ಅಲ್ಲಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿದರು.