ನವದೆಹಲಿ: ಅತಿವೃಷ್ಟಿಯಿಂದ ಹಾನಿಗೊಳಗಾದ ರಾಜ್ಯದ ಕೊಡಗು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಂಭವಿಸಿರುವ ಹಾನಿಯನ್ನು ಸಮೀಕ್ಷೆ ಮಾಡಲು ಕೇಂದ್ರ ಸರ್ಕಾರವು ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಹೆಚ್ ದಿ ಕುಮಾರಸ್ವಾಮಿ ನೇತೃತ್ವದ ರಾಜ್ಯದ ನಿಯೋಗ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ನೆರೆ ಹಾನಿ ಜಿಲ್ಲೆಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ 2,000 ಕೋಟಿ ರೂ. ಪ್ಯಾಕೇಜ್ ಘೋಷಿಸಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ಮೋದಿ, ಸಮೀಕ್ಷೆಗಾಗಿ ಎರಡು ತಂಡಗಳನ್ನು ಕಳಿಸುವುದಾಗಿ ತಿಳಿಸಿದ್ದಾರೆ.
ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಜನ-ಜಾನುವಾರುಗಳು ಜೀವ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಆ. 2ನೇ ವಾರದಲ್ಲಿ ಕಳೆದ 118 ವರ್ಷಗಳಲ್ಲೇ ದಾಖಲೆ ಮಳೆ ಸುರಿದಿದ್ದರಿಂದ ಅಪಾರ ನಷ್ಟ ಸಂಭವಿಸಿದ್ದು, ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಿಗೆ, ಮೂಲ ಸೌಕರ್ಯ, ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ. ಅತಿವೃಷ್ಟಿಯಿಂದಾಗಿ ಈ ಜಿಲ್ಲೆಗಳಲ್ಲಿ ಒಟ್ಟು 3705.87 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪುನರ್ವಸತಿ ಮತ್ತು ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೊಡಗು ಮತ್ತಿತರ ಜಿಲ್ಲೆಗಳಿಗೆ 2000 ರೂಪಾಯಿಗಳ ಪ್ಯಾಕೇಜ್ ಘೋಷಿಸಿ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ನಿಯೋಗದ ಇತರ ಸದಸ್ಯರೊಂದಿಗೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಂತೆಯೇ ಕರ್ನಾಟಕದ ಒಳನಾಡಿನಲ್ಲಿ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಕುರಿತೂ ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದ್ದು, ಈ ಕುರಿತು ನಾಳೆ ಸಂಪುಟ ಉಪಸಮಿತಿ ಸಭೆ ನಡೆಸಿ ಪ್ರಸ್ತಾವನೆಯನ್ನು ಅಂತಿಮಗೊಳಿಸಲಿದೆ. ಅದರಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನಿಯೋಗವು ಪ್ರಧಾನಿಯವರಿಗೆ ಮಾಹಿತಿ ನೀಡಿದೆ.
ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಹೆಚ್.ಡಿ.ದೇವೇಗೌಡ,ಮುಖ್ಯಮಂತ್ರಿ ಹೆಚ್ ದಿಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಗ್ರಾಮೀಣಾಭಿ ವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನಿಯೋಗದಲ್ಲಿ ಇದ್ದರು. ಆದರೆ ಬಿಜೆಪಿ ಕೇಂದ್ರ ಸಚಿವರು, ಸಂಸದರು ಮಾತ್ರ ಗೈರಾಗಿದ್ದರು.