ಪೆಟ್ರೋಲ್, ಡೀಸೆಲ್, ಅಡುಗೆ ಸಿಲಿಂಡರ್ ದರ ಏರಿಕೆ: ಭಾರತ ಬಂದ್‍ಗೆ ಕನ್ನಡ ಚಳವಳಿ ವಾಟಾಳ್ ಪಕ್ಷ ಬೆಂಬಲ

ಬೆಂಗಳೂರು, ಸೆ.8- ಪೆಟ್ರೋಲ್, ಡೀಸೆಲ್, ಅಡುಗೆ ಸಿಲಿಂಡರ್ ದರ ಏರಿಕೆ ಖಂಡಿಸಿ ಅಖಿಲ ಭಾರತ ಬಂದ್‍ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.10ರಂದು ಬೆಳಗ್ಗೆ 11.30ಕ್ಕೆ ಬಂದ್ ಪ್ರಯುಕ್ತ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದರು.

ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ 10 ಬಾರಿ ಬೆಲೆ ಏರಿಸಿದೆ. ಇದರಿಂದ ಮಧ್ಯಮ ವರ್ಗದ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ ಪ್ರಯಾಣ ದರ ಏರಿಕೆ ಕೂಡಾ ಸರಿಯಾದ ಕ್ರಮವಲ್ಲ ಎಂದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಸ್ ಪ್ರಯಾಣ ದರ ಏರಿಸಲು ತೀರ್ಮಾನಿಸಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರ ಏರಿಸಬಾರದು ಎಂದು ಒತ್ತಾಯಿಸಿದರು.
ಈಗಾಗಲೇ ಸೈಕಲ್ ಮೆರವಣಿಗೆ ಮಾಡುವ ಮೂಲಕ ಡೀಸೆಲ್, ಪೆಟ್ರೋಲ್, ಗ್ಯಾಸ್ ದರ ಏರಿಕೆಯನ್ನು ಖಂಡಿಸಿದ್ದೇವೆ. ಇವುಗಳ ಬೆಲೆ ಏರಿಕೆ ಅವೈಜ್ಞಾನಿಕ. ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತೇವೆ ಹಾಗೂ ಭಾರತ್ ಬಂದ್‍ಗೆ ಬೆಂಬಲ ನೀಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ