ರಸ್ತೆ ಅಪಘಾತಗಳ ಪ್ರಮಾಣ ಕಳೆದ ಎರಡು ವರ್ಷಗಳಲ್ಲಿ ಇಳಿಕೆ

ಬೆಂಗಳೂರು, ಸೆ.8- ರಸ್ತೆ ಸುರಕ್ಷತೆ ಬಗ್ಗೆ ರಾಜ್ಯ ಸರ್ಕಾರಕೈಗೊಂಡಿರುವ ಹಲವಾರು ಸುಧಾರಣಾ ಕ್ರಮಗಳಿಂದಾಗಿ ರಸ್ತೆ ಅಪಘಾತಗಳ ಪ್ರಮಾಣ ಕಳೆದ ಎರಡು ವರ್ಷಗಳಲ್ಲಿ ಇಳಿಕೆಯಾಗಿದೆ ಎಂದು ಪಿಡಬ್ಲ್ಯೂಡಿ ಇಲಾಖೆ ಕಾರ್ಯದರ್ಶಿ ಕೆ.ಎಸ್.ರೆಡ್ಡಿ ತಿಳಿಸಿದರು.
ನಗರದಲ್ಲಿಂದು ನಡೆದ ರಸ್ತೆ ಸುರಕ್ಷತೆ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 80 ವರ್ಷಗಳಿಂದಲೂ ರಸ್ತೆ ಅಪಘಾತದಿಂದ ಸಾವು-ನೋವುಗಳ ಪ್ರಮಾಣ ಹೆಚ್ಚಳವಾಗುತ್ತಾ ಬಂದಿದ್ದು, ಕಳೆದ ಎರಡು ವರ್ಷಗಳಿಂದ ಅದು ಇಳಿಮುಖವಾಗಿದೆ. 2013-14ರಲ್ಲಿ 44,020 ಅಪಘಾತಗಳಾಗಿದ್ದರೆ, 2017ರಲ್ಲಿ 42,542ಕ್ಕೆ ಇಳಿಕೆಯಾಗಿದೆ. ಸುಪ್ರೀಂಕೋರ್ಟ್ ಸಮಿತಿ ಕಾಲ ಕಾಲಕ್ಕೆ ನೀಡುವ ನಿರ್ದೇಶನಗಳನ್ನು ಕೂಡ ಪಾಲಿಸಲಾಗುತ್ತಿದೆ. ರಾಜ್ಯದಲ್ಲಿ ರಸ್ತೆ ಸುರಕ್ಷತೆ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂದರು.

ಅಲ್ಲದೆ, ಕರ್ನಾಟಕ ರಸ್ತೆ ಸುರಕ್ಷತಾ ಕಾಯ್ದೆಯನ್ನು ಕೂಡ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ 565 ಅಪಘಾತ ವಲಯಗಳನ್ನು ಗುರಿತಿಸಲಾಗಿತ್ತು. 2016-17ರಲ್ಲಿ 195 ಹಾಗೂ 2017-18ರಲ್ಲಿ 118 ಅಪಘಾತ ವಲಯಗಳನ್ನು ಸರಿಪಡಿಸಲಾಗಿದೆ. ರಸ್ತೆ ಸುರಕ್ಷತೆ ಮತ್ತು ಅಪಘಾತ ವಲಯಗಳನ್ನು ಸರಿಪಡಿಸಲು ಲೋಕೋಪಯೋಗಿ ಇಲಾಖೆಯಲ್ಲಿ ಪ್ರತ್ಯೇಕ ಅನುದಾನ ಒದಗಿಸಲಾಗಿದೆ ಪ್ರಸ್ತಕ ಸಾಲಿನಲ್ಲಿ 230 ಕೋಟಿ ರೂ. ಈ ಉದ್ದೇಶಕ್ಕೆ ಅನುದಾನ ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದ್ದಾರಿ ಸೇರಿದಂತೆ ರಸ್ತೆಗಳ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವಾಗಲೇ ಶೇ.2ರಿಂದ 3ರಷ್ಟು ಹಣವನ್ನು ಒದಗಿಸಲಾಗುತ್ತದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಈ ಅನುದಾನ ಶೇ.5ರವರೆಗೂ ಹೆಚ್ಚಳವಾಗಲಿದೆ. ರಸ್ತೆಗಳ ಆಡಿಟ್‍ನ್ನು ಕೂಡ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಎಐಟಿಡಿಯ ಬಿ.ಎನ್.ಪುರಿ ಮಾತನಾಡಿ, ದೇಶದಲ್ಲಿ ಪ್ರತಿ ದಿನ ರಸ್ತೆ ಅಪಘಾತದಿಂದ 17 ಮಂದಿ ಮೃತಪಡುತ್ತಿದ್ದಾರೆ. ಈಗಾಗಲೇ 20 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 1100 ಮಂದಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡಲಾಗಿದ್ದು, 5500 ಮಂದಿಗೆ ಈ ಬಗ್ಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಡಾ.ನಿರ್ಮಲ್‍ಜಿತ್‍ಸಿಂಗ್, ಎಐಟಿಡಿ ರಸ್ತೆ ಸುರಕ್ಷತೆ ನಿರ್ದೇಶಕ ಎಸ್.ಎಂ.ಸರಿನ್, ರಸ್ತೆ ಸುರಕ್ಷತೆ ಸಲಹೆಗಾರ ಡಿ.ಪಿ.ಗುಪ್ತ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ