ಮುಂಬೈ: ಯುವತಿಯನ್ನು ಕಿಡ್ನ್ಯಾಪ್ ಮಾಡಿಯಾದರೂ ಯುವಕನಿಗೆ ಸಹಾಯಮಾಡುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ರಾಮ್ ಕದಂ’ ಅವರ ನಾಲಿಗೆ ಕತ್ತರಿಸಿದವರಿಗೆ ರೂ.5 ಲಕ್ಷ ಬಹುಮಾನ ನೀಡುತ್ತೇನೆಂದು ಕಾಂಗ್ರೆಸ್ ಮಾಜಿ ಸಚಿವ ಸುಬೋಧ್ ಸೌಜಿ ಘೋಷಿಸಿದ್ದಾರೆ.
ನಾನು ಕದಂ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇನೆ. ಇದು ಓರ್ವ ಜನಪ್ರತಿನಿಧಿ ನೀಡುವ ಹೇಳಿಕೆಯಾ ಎಂದು ಪ್ರಶ್ನಿಸಿರುವ ಸೌಜಿ, ನಾನು ಕದಂ ನಾಲಿಗೆ ಕತ್ತರಿಸಿ ತಂದವರಿಗೆ 5 ಲಕ್ಷ ರೂಪಾಯಿ ನೀಡುತ್ತೇನೆ ಎಂದಿದ್ದಾರೆ.
ಘಾಟ್‌ಕೋಪರ್‌ನಲ್ಲಿ ನಡೆದ ದಹಿ ಹಂಡಿ ಕಾರ್ಯಕ್ರಮದಲ್ಲಿ ನಾಲಿಗೆ ಹರಿಯ ಬಿಟ್ಟಿದ್ದ ಕದಂ ಯುವಕನೊಬ್ಬನಿಗೆ ನಿನು ಪ್ರಪೋಸ್ ಮಾಡಿದ ಯುವತಿ ಒಪ್ಪಿಕೊಳ್ಳದಿದ್ದರೆ ನಾನು ಆಕೆಯನ್ನು ಕಿಡ್ನ್ಯಾಪ್ ಮಾಡಿಯಾದರೂ ನಿನಗೆ ತಂದು ಮದುವೆ ಮಾಡಿಸುವುದಾಗಿ ಹೇಳಿಕೆ ನೀಡಿದ್ದರು. ಈ ಮೂಲಕ ಯುವ ಜನತೆಯ ಯಾವ ಕೆಲಸಕ್ಕೂ ನಾನು ನೆರವಾಗುತ್ತೇನೆ ಎಂದಿದ್ದರು.
ಕದಂ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿತ್ತು. ಶಿವಸೇನೆ, ಕಾಂಗ್ರೆಸ್ ವ್ಯಾಪಕ ಆಕ್ರೋಶ ಹೊರ ಹಾಕಿತ್ತು. ಮಹಾರಾಷ್ಟ್ರದ ಮಹಿಳಾ ಆಯೋಗ ಈಗಾಗಲೇ ಶಾಸಕ ರಾಮ್ ಕದಂಗೆ ನೊಟೀಸ್ ನೀಡಿದೆ.