ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (DGP) ಶೇಷ ಪಾಲ್ ವೈದ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದೆ. ಸಾರಿಗೆ ಇಲಾಖೆ ಕಮಿಷನರ್ ಹುದ್ದೆಯವನ್ನು ವಹಿಸಿಕೊಳ್ಳುವಂತೆ ವೈದ್ ಅವರಿಗೆ ಸೂಚಿಸಲಾಗಿದೆ.
ವೈದ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಅಧಿಕೃತ ನೇಮಕವಾಗುವರೆಗೂ ಸದ್ಯ ಕಾರಾಗೃಹ ಇಲಾಖೆ ಮಹಾನಿರ್ದೇಶಕರಾಗಿರುವ ದಿಲ್ಬಾಗ್ ಸಿಂಗ್ ಅವರು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಕಳೆದ ಜೂ. 20 ರಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಗಿತ್ತು. ಆ. 23ರಂದು ಎನ್.ಎನ್. ವೊಹ್ರಾ ಅವರ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರನ್ನಾಗಿ ಬಿಹಾರದ ಮಾಜಿ ಗವರ್ನರ್ ಸತ್ಯ ಪಾಲ್ ಮಲ್ಲಿಕ್ ಅವರನ್ನು ರಾಷ್ಟ್ರಪತಿಗಳು ನೇಮಿಸಿಸಿದ್ದರು.
1986ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ವೈದ್, 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಆಗಿ ನೇಮಕಗೊಂಡಿದ್ದರು. 2019ರ ಅಕ್ಟೋಬರ್ನಲ್ಲಿ ವೈದ್ ನಿವೃತ್ತಿಯಾಗಲಿದ್ದಾರೆ.
ಕಳೆದ ವಾರವಷ್ಟೇ ಮೂವರು ಪೊಲೀಸರು ಹಾಗೂ ಅವರ ಎಂಟು ಮಂದಿ ಸಂಬಂಧಿಗಳನ್ನು ಉಗ್ರರು ಅಪಹರಿಸಿದ್ದರು. ನಂತರ ಅವರನ್ನು ಬಿಡುಗಡೆಗೊಳಿಸಿದ್ದರು. ಹಿಜ್ಬುಲ್ ಮುಜಾಹಿದ್ದೀನ್ನ ಮೂವರು ಉಗ್ರರ ಬಂಧನಕ್ಕೆ ಪ್ರತಿಕಾರವಾಗಿ ಪೊಲೀಸರನ್ನು ಅಪಹರಿಸಿದ್ದರು. ಈ ಪ್ರಕರಣದ ಬೆನ್ನಲ್ಲೇ ಎಸ್.ಪಿ. ವೈದ್ರನ್ನು ಪೊಲೀಸ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲಾಗಿದೆ.
ವೈದ್ ವರ್ಗಾವಣೆ ಕುರಿತಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಟ್ವೀಟ್ ಮಾಡಿ, ವೈದ್ ಅವರ ವರ್ಗಾವಣೆಗೆ ಅವಸರ ಇರಲಿಲ್ಲ. ಆ ಹುದ್ದೆಗೆ ನೇಮಕಾತಿ ಆದ ನಂತರವೇ ಅವರನ್ನು ವರ್ಗಾಯಿಸಬಹುದಿತ್ತು. ನಾಯಕತ್ವದ ಗೊಂದಲದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.