ಬೆಂಗಳೂರು, ಸೆ.6: ಭಡ್ತಿ ಮೀಸಲಾತಿ ಕುರಿತು ಸಂಪುಟದಲ್ಲಿ ಅನೌಪಚಾರಿಕ ಚರ್ಚೆಯಾಗಿದೆ. ಕಳೆದ ಬಾರಿ ಸುಪ್ರೀಂಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆದ ಸಂದರ್ಭದಲ್ಲಿಯೇ ಕಾನೂನಾತ್ಮಕವಾಗಿ ವಿಧಾನಮಂಡಲದಲ್ಲಿ ಮಂಜೂರಾತಿ ಪಡೆದಿರುವ ಕಾಯ್ದೆಯನ್ನು ಜಾರಿ ಮಾಡಲು ಮನವಿ ಸಲ್ಲಿಸಲಾಗಿತ್ತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಸೆ.12ಕ್ಕೆ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಿರುವುದರಿಂದ ಅಲ್ಲಿಯವರೆಗೆ ಕಾಯುವಂತೆ ಮೌಖಿಕ ನಿರ್ದೇಶನ ನೀಡಿತ್ತು ಎಂದರು.
ಆದುದರಿಂದ, ಈಗ ಪ್ರಕರಣ ವಿಚಾರಣೆಗೆ ಬಂದಾಗ ಸುಪ್ರೀಂಕೋರ್ಟ್ ಎದುರು ಈ ಕಾಯ್ದೆಯನ್ನು ನ್ಯಾಯಾಲಯದ ತೀರ್ಪಿಗೆ ಒಳಪಟ್ಟು ಮಾಡಲು ಅವಕಾಶ ನೀಡುವಂತೆ ಕೋರಿ ಅರ್ಜಿ ಹಾಕುವಂತೆ ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಗೆ ತಿರುಗೇಟು: ನೆರೆ ಪೀಡಿತ ಕೊಡಗು ಜಿಲ್ಲೆಯಲ್ಲಿ ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಕುರಿತು ನಮ್ಮನ್ನು ಟೀಕಿಸುವ ಯಾವ ನೈತಿಕತೆಯೂ ಬಿಜೆಪಿಯವರಿಗಿಲ್ಲ ಕೃಷ್ಣಭೈರೇಗೌಡ ತಿರುಗೇಟು ನೀಡಿದರು.
ರಾಜ್ಯ ಸರಕಾರವು ಕೊಡಗು ನೆರೆ ಸಂತ್ರಸ್ತರ ಪರಿಹಾರ ಕಾಮಗಾರಿಗಳಿಗಾಗಿ 70 ಕೋಟಿ ರೂ.ಬಿಡುಗಡೆ ಮಾಡಿದೆ. ಅಲ್ಲದೆ, 200 ಕೋಟಿ ರೂ.ಗಳನ್ನು ನೀಡಲು ತೀರ್ಮಾನ ಮಾಡಿದೆ. ಆದರೆ, ಕೇಂದ್ರ ಸರಕಾರದ ಯಾವ ಅಧಿಕಾರಿಯೂ ಈವರೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿಲ್ಲ ಎಂದು ಅವರು ಹೇಳಿದರು.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ರಕ್ಷಣಾ ಸಿಬ್ಬಂದಿ ಅಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರಿಂದ ಅವರು ಅಲ್ಲಿಗೆ ಭೇಟಿ ನೀಡಿದ್ದರು. ಆದರೆ, ಕೇಂದ್ರ ಸರಕಾರದ ಪರವಾಗಿ ಒಂದು ಅಧಿಕೃತ ಘೋಷಣೆಯನ್ನು ಅವರು ಅಲ್ಲಿ ಮಾಡಿಲ್ಲ ಎಂದು ಕೃಷ್ಣಭೈರೇಗೌಡ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಆಗಿರುವ ನಷ್ಟದ ಕುರಿತು ರಾಜ್ಯ ಸರಕಾರದ ಪರವಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ, ನಮ್ಮ ಮನವಿ ಕುರಿತು ಈವರೆಗೆ ಅವರು ಚಕಾರವೆತ್ತಿಲ್ಲ. ನಮ್ಮ ಸರಕಾರವು ಕೊಡಗು ಜಿಲ್ಲೆಯಲ್ಲಿ ಸಾಧ್ಯವಾದ ಎಲ್ಲ ಕೆಲಸಗಳನ್ನು ಮಾಡಿದೆ. ಪರಿಹಾರ ಕೆಲಸ ನಿರಂತರವಾಗಿನಡೆಯುತ್ತಿದೆ ಎಂದು ಅವರು ಹೇಳಿದರು.