ಒಂದು ದಿನದಲ್ಲಿ 700 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ: ಕೋಟ್ಯಂತರ ರೂ. ಲೂಟಿ ಮಾಡಿದ ಸಂಸ್ಥೆ

ಬೆಂಗಳೂರು, ಸೆ.6- ಏನೇ ಪ್ರಯತ್ನಪಟ್ಟರೂ ಒಂದು ದಿನಕ್ಕೆ 15 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಬಹುದಷ್ಟೆ. ಆದರೆ, ಸರ್ಕಾರೇತರ ಸಂಸ್ಥೆಯೊಂದು ಒಂದು ದಿನದಲ್ಲಿ 700 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿರುವುದಾಗಿ ಹೇಳಿ ಕೋಟ್ಯಂತರ ರೂ. ಲೂಟಿ ಮಾಡಿದೆ.
ಇಂತಹ ಹಣ ಲಪಟಾಯಿಸುವ ಉದ್ದೇಶದ ಎನ್‍ಜಿಒಗಳಿಂದಲೇ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಕಾರಣ ಎಂಬ ಮಾತುಗಳು ಕೇಳಿಬಂದಿವೆ.
ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ನಗರದಲ್ಲಿ ಹಲವಾರು ಎನ್‍ಜಿಒಗಳಿವೆ. ಇವುಗಳು ಸಂತಾನಹರಣ ಶಸ್ತ್ರ ಚಿಕಿತ್ಸೆ ಹೆಸರಿನಲ್ಲಿ ಹಣದ ಲೂಟಿಯನ್ನೇ ಹೊಡೆಯುತ್ತಿವೆ. ಇದಕ್ಕೆ ಉದಾಹರಣೆ ಎಂದರೆ ಸುಷ್ಮಾ ಎಂಟರ್‍ಪ್ರೈಸಸ್ ಎಂಬ ಸರ್ಕಾರೇತರ ಸಂಸ್ಥೆ ಒಂದೇ ದಿನದಲ್ಲಿ 700 ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿರುವುದಾಗಿ ಹೇಳಿಕೊಂಡು ಹಣ ಪಡೆದಿದೆ. ಒಂದು ದಿನದಲ್ಲಿ ಕನಿಷ್ಟವೆಂದರೆ 15 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಬಹುದು. ಆದರೆ, 700 ನಾಯಿಗಳಿಗೆ ಖಂಡಿತ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಸಾಧ್ಯವೇ ಇಲ್ಲ.
ಈ ಸಂಘ-ಸಂಸ್ಥೆಗಳ ಲೂಟಿಯಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಈ ಸಂಸ್ಥೆಗಳ ಲಂಪಟತನವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ವಾರಾಂತ್ಯದೊಳಗೆ ಇಂತಹ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಸಂಪತ್‍ರಾಜ್ ಭರವಸೆ ನೀಡಿದ್ದಾರೆ.
ತನಿಖೆಗೆ ಆಗ್ರಹ: ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯಿಂದ ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮೇಯರ್ ಹಾಗೂ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ