ಬೆಂಗಳೂರು, ಸೆ.6-ನೂರು ದಿನಗಳ ಆಡಳಿತ ಪೂರೈಸಿ ಮುಂದಡಿ ಇಡುತ್ತಿರುವ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಗಂಡಾಂತರ ಎದುರಾಗಿದೆಯೇ..?
ಮೂಲಗಳನು ಉಲ್ಲೇಖಿಸುವುದಾದರೆ ದೋಸ್ತಿ ಸರ್ಕಾರಕ್ಕೆ ಸದ್ಯದಲ್ಲೇ ಮಹಾ ಅಪಾಯ ಎದುರಾಗಲಿದ್ದು, ಆಡಳಿತಾರೂಢ ಎರಡೂ ಪಕ್ಷಗಳ ಕೆಲ ಶಾಸಕರು ಕೈ ಕೊಡಲು ಸಿದ್ದರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಬಿಜೆಪಿ ನಾಯಕರು ಸದ್ಯದಲ್ಲೇ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆಂದು ಹೇಳುತ್ತಿರುವುದನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ.
ಸುಮಾರು 12ರಿಂದ 13 ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಇವರ್ಯಾರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಸರ್ಕಾರಕ್ಕೆ ಈಗಿರುವ ಬೆಂಬಲವನ್ನು ಹಿಂಪಡೆದಿದ್ದೇವೆಂದಷ್ಟೇ ರಾಜ್ಯಪಾಲರಿಗೆ ಪತ್ರ ನೀಡಲಿದ್ದಾರೆ. ಇದರ ಸುಳಿವು ಅರಿತೇ ಮುಖ್ಯಮಂತ್ರಿ ಕುಮಾರಸ್ವಾಮಿ, ನಿನ್ನೆ ನನ್ನ ಸರ್ಕಾರವನ್ನು ಅಲುಗಾಡಿಸಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಸಾಮಾನ್ಯವಾಗಿ ಕುಮಾರಸ್ವಾಮಿ ರಾಜಕೀಯವಾಗಿ ಮಾತನಾಡಿದರೆ ಅದಕ್ಕೊಂದಿಷ್ಟು ಮಹತ್ವವಿರುತ್ತದೆ. ಸುಖಾಸುಮ್ಮನೆ ಬೇರೆಯವರ ರೀತಿ ಪುಕ್ಕಟ್ಟೆ ಪ್ರಚಾರಕ್ಕಾಗಿ ಹೇಳುವ ಜಾಯಮಾನದವರಲ್ಲ ಅವರು ಎಂಬುದನ್ನು ಕಾಂಗ್ರೆಸ್ -ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ.
ಇಬ್ಬರು ಸಚಿವರಿಗೆ ಗಾಳ:
ಈ ಬಾರಿ ಬಿಜೆಪಿ ಆಪರೇಷನ್ ಕಮಲ ನಡೆಸದೆ ಕೇವಲ ಕಾಂಗ್ರೆಸ್-ಜೆಡಿಎಸ್ನಿಂದ ಅಸಮಾಧಾನಗೊಂಡಿರುವ ಶಾಸಕರನ್ನಷ್ಟೇ ಸೆಳೆಯಲು ಮುಂದಾಗಿದೆ. ಉತ್ತರ ಕರ್ನಾಟಕ ಹಾಗೂ ಕುಮಾರಸ್ವಾಮಿ ಸಂಪುಟದಲ್ಲಿರುವ ಇಬ್ಬರು ಸಚಿವರಿಗೆ ಗಾಳ ಹಾಕಲಾಗಿದೆ.
ಸರ್ಕಾರ ಹಾಗೂ ಪಕ್ಷದ ಕೆಲವು ತೀರ್ಮಾನಗಳಿಂದ ಬೇಸತ್ತಿರುವ ಇಬ್ಬರು ಸಚಿವರು ಸೇರಿದಂತೆ ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಸರ್ಕಾರಕ್ಕೆ ತಮ್ಮ ಬೆಂಬಲವಿಲ್ಲ ಎಂಬ ಪತ್ರವನ್ನು ರಾಜ್ಯಪಾಲರಿಗೆ ನೀಡಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಮೇ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಮಂಡಿಸಿದ್ದ ವಿಶ್ವಾಸ ಮತಯಾಚನೆಯನ್ನು ಹಿಂಪಡೆದಿದ್ದರು. ಈಗ ಇದನ್ನೇ ಆಧಾರವಾಗಿಟ್ಟುಕೊಂಡಿರುವ ಬಿಜೆಪಿ ನಾಯಕರು ಕೆಲ ಶಾಸಕರನ್ನು ತನ್ನತ್ತ ಸೆಳೆದು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಒಂದು ಬಾರಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಿದರೆ ಅದಕ್ಕೆ 6 ತಿಂಗಳು ಮಾನ್ಯತೆ ಇರುತ್ತದೆ. ಈ ಅವಧಿಯೊಳಗೆ ಸರ್ಕಾರವನ್ನು ಯಾರೊಬ್ಬರು ಏನೂ ಮಾಡಲು ಸಾಧ್ಯವಾಗುವುದಿಲ್ಲ.
ಆದರೆ ಯಡಿಯೂರಪ್ಪನವರು ತಾವು ಮಂಡಿಸಿದ್ದ ವಿಶ್ವಾಸ ಮತ ಯಾಚನೆಯ ನಿರ್ಣಯವನ್ನು ಹಿಂಪಡೆದಿದ್ದರು. ಒಂದು ವೇಳೆ ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದುದ್ದೇ ಆದಲ್ಲಿ ವಿರೋಧ ಪಕ್ಷ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗುತ್ತದೆ.
ಶಾಸಕರ ವಿರುದ್ಧ ವಿಪ್ ಜಾರಿ ಮಾಡಿದರೂ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಹಿಂದೆ ರಾಜ್ಯಸಭಾ ಚುನಾವಣೆ ವೇಳೆ ಅಂದು ಜೆಡಿಎಸ್ನ 7 ಶಾಸಕರು ಕಾಂಗ್ರೆಸ್ ಪರ ವಿಪ್ ಉಲ್ಲಂಘಿಸಿ ಮತ ಹಾಕಿದ್ದರು.
ಅಂದಿನ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ವರ್ಷಗಟ್ಟಲೇ ವಿಚಾರಣೆ ನಡೆಸಿದರೆ ಹೊರತು ಅಧಿಕಾರಾವಧಿ ಮುಗಿಯುವರೆಗೂ ತೀರ್ಪು ನೀಡಿರಲಿಲ್ಲ.
ಒಂದು ವೇಳೆ ಬಿಜೆಪಿ ಸರ್ಕಾರ ರಚನೆ ಮಾಡಿದರೆ ಸ್ಪೀಕರ್ ತಮ್ಮ ಪಕ್ಷದವರೇ ಆಗುವುದರಿಂದ ವಿಚಾರಣೆ ವಿಳಂಬ ಮಾಡುವ ಲೆಕ್ಕಾಚಾರವು ನಡೆದಿದೆ.
ಲೋಕಸಭೆ ಚುನಾವಣೆವರೆಗೂ ಕಾಯುವುದು ಬೇಡ:
ಇನ್ನು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರ ಲೋಕಸಭಾ ಚುನಾವಣೆವರೆಗೂ ಮುಂದುವರೆಯುವುದು ಬೇಡ ಎಂಬ ಸಂದೇಶ ಹೈಕಮಾಂಡ್ನಿಂದ ಬಂದಿದೆ.
ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷ ಮೇಲುಗೈ ಸಾಧಿಸಿತ್ತು. ಒಂದು ವೇಳೆ ಚುನಾವಣೆವರೆಗೂ ಇದು ಮುಂದುವರೆದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬುದನ್ನು ರಾಷ್ಟ್ರೀಯ ನಾಯಕರು ಅರಿತಿದ್ದಾರೆ. ಹೀಗಾಗಿಯೇ ಸರ್ಕಾರ ಅಸ್ಥಿರಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗುತ್ತಿದೆ.