ಹೈದರಾಬಾದ್: ಕೆ ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ವಿಧಾನಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಲಾಗಿದ್ದು, ನೂತನ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಕೆಸಿಆರ್ ಅವರೇ ಮುಂದುವರೆಯಲಿದ್ದಾರೆ.
ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ತೆರಳುವ ನಿರ್ಣಯಕ್ಕೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ನಂತರ ರಾಜಭವನಕ್ಕೆ ತೆರಳಿದ ರಾವ್ ಅವರು ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರಿಗೆ ನಿರ್ಣಯವನ್ನು ಹಸ್ತಾಂತರಿಸಿದರು. ರಾಜ್ಯಪಾಲರು ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಆದರೆ, ನೂತನ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಕೆಸಿಆರ್ ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ.
ತೆಲಂಗಾಣ ಮೊದಲ ವಿಧಾನಸಭೆಯ ಅವಧಿ 2019ರ ಏಪ್ರಿಲ್-ಮೇ ವರೆಗೆ ಇದೆಯಾದರೂ, ಇದೇ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದರ ಜತೆಗೇ ಚುನಾವಣೆ ಎದುರಿಸಲು ಕೆಸಿಆರ್ ತೀರ್ಮಾನಿಸಿದ್ದಾರೆ. ಅವಧಿಗೂ ಮುನ್ನ ಚುನಾವಣೆ ನಡೆಯಲಿದೆಯೇ ಎಂಬುದು ಚುನಾವಣಾ ಆಯೋಗದ ನಿರ್ಧಾರದ ಮೇಲೆ ಅವಲಂಬಿತವಾಗಿದೆ.