ನವದೆಹಲಿ: ಭೀಮಾ–ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಸಾಮಾಜಿಕ ಹೋರಾಟಗಾರರ ಗೃಹಬಂಧನವನ್ನು ಸುಪ್ರಿಂಕೋರ್ಟ್ ಸೆ.12ರವರೆಗೆ ವಿಸ್ತರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ವಿಶೇಷ ಪೀಠ ತನಿಖಾಧಿಕಾರಿಗಳ ಮನವಿ ಮೇರೆಗೆ ಹೋರಾಟಗಾರರ ಗೃಹಬಂಧನ ಅವಧಿಯನ್ನು ವಿಸ್ತರಣೆ ಮಾಡಿದೆ. ಪುಣೆ ಪೊಲೀಸ್ ಉಪಾಯುಕ್ತರು ಸಲ್ಲಿಕೆ ಮಾಡಿದ್ದ ಅಫಿಡವಿಟ್ ಸ್ವೀಕರಿಸಿದ ಸುಪ್ರೀಂ ಕೋರ್ಟ್, ಎಲ್ಲ ಗೃಹ ಬಂಧನದಲ್ಲಿರುವ ಐದೂ ಹೋರಾಟಗಾರರ ಗೃಹ ಬಂಧನ ಅವಧಿ ವಿಸ್ತರಣೆ ಮಾಡಿದೆ.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪುಣೆ ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳನ್ನು ಪರಿಶೀಲಿಸಿದರೆ ಬಂಧಿತರು ದೇಶಕ್ಕೆ ಎಂಥ ಹಾನಿ ಮಾಡುತ್ತಿದ್ದರು ಎಂಬುದು ನ್ಯಾಯಾಲಯಕ್ಕೆ ಅರಿವಾಗುತ್ತದೆ. ರೊಮಿಲಾ ಥಾಪರ್ ಮತ್ತು ಇತರ ಅರ್ಜಿದಾರರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ಇದೇ ವೇಳೆ ಸುಪ್ರಿಂಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಸುದ್ದಿಗೋಷ್ಠಿ ನಡೆಸಿರುವುದನ್ನು ಆಕ್ಷೇಪಿಸಿದ್ದು, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಪೊಲೀಸರು ಸೂಕ್ಷ್ಮವಾಗಿ ವರ್ತಿಸಬೇಕು. ಈ ಕುರಿತು ಸರ್ಕಾರ ಪೊಲೀಸರಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಹೇಳಿದೆ.
ಐವರು ಹೋರಾಟಗಾರರ ಬಂಧನವನ್ನು ಆಕ್ಷೇಪಿಸಿ ಇತಿಹಾಸಜ್ಞೆ ರೊಮಿಲಾ ಥಾಪರ್ ಮತ್ತು ಇತರರು ಸುಪ್ರಿಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪದಡಿ ಪುಣೆ ಪೊಲೀಸರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ಐವರು ಸಾಮಾಜಿಕ ಹೋರಾಟಗಾರರಾದ ವರವರ ರಾವ್, ಸುಧಾ ಭಾರದ್ವಾಜ್, ಅರುಣ್ ಫೆರಾರಿಯಾ, ಗೌತಮ್ ನವಾಲಖ ಮತ್ತು ವರ್ನನ್ ಗೋನ್ಸಾಲ್ವೀಸ್ ಅವರನ್ನು ಬಂಧಿಸಿದ್ದರು.
SC extends,house arrest,5 activists, held over