ನವದೆಹಲಿ: ಸಲಿಂಗಕಾಮ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಸೆಕ್ಷನ್ 377 ಅನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಬ್ರಿಟನ್ನಲ್ಲಿ ಸಲಿಂಗಕಾಮ ಅಪರಾಧವಲ್ಲ. ಆದರೆ, ಬ್ರಿಟಿಷರು ರೂಪಿಸಿದ ಕಾನೂನು ಪ್ರಕಾರ ನಿಷೇಧ ಹೇರಿರುವುದು ಸರಿಯಲ್ಲ ಎಂದು ಸಲಿಂಗಕಾಮಿಗಳ ಪರ ವಕೀಲರು ವಾದ ಮಂಡಿಸಿದ್ದರು.
ಈ ಬಗ್ಗೆ ಸಂಪೂರ್ಣವಾದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠ ಇಂದು ಮಹತ್ವದ ತೀರ್ಪನ್ನ ಪ್ರಕಟಿಸಿದೆ. ಅಂತಿಮವಾಗಿ 156 ವರ್ಷಗಳ ಕಾನೂನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಅಂತಿಮವಾಗಿ ತೀರ್ಪು ನೀಡಿದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ‘ವೈವಿಧ್ಯತೆ ಶಕ್ತಿಯನ್ನ ಗೌರವಿಸಬೇಕಾಗಿದೆ. ಸಲಿಂಗಿಗಳಿಗೆ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದ್ದಾರೆ. ಈ ಮೂಲಕ 156 ವರ್ಷಗಳ ಕಾನೂನಿಗೆ ಎಳ್ಳುನೀರು ಬಿಡಲಾಗಿದೆ. ಸಲಿಂಗಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಈ ತೀರ್ಪಿನ ಮೂಲಕ ಸುದೀರ್ಘ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಎಳೆಯಲಾಗಿದೆ. ಅಷ್ಟೇ ಅಲ್ಲ ಐವರು ನ್ಯಾಯಮೂರ್ತಿಗಳ ಪೀಠದಿಂದ ಸಹಮತದ ತೀರ್ಪು ಹೊರಬಿದ್ದಿದೆ.
2009 ರಲ್ಲಿ ದೆಹಲಿ ಹೈಕೋರ್ಟ್ ಸೆಕ್ಷನ್ 377 ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಆಗ ವಿಚಾರಣೆ ನಡೆಸಿದ್ದ ಸುಪ್ರೀಂ ದೆಹಲಿ ಹೈಕೋರ್ಟ್ ತೀರ್ಪನ್ನ ವಜಾ ಮಾಡಿ, ಸೆಕ್ಷನ್ 377ಗೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ಈ ತೀರ್ಪನ್ನ ಪುನರ್ ಪರಿಶೀಲಿಸುವಂತೆ ಲೈಂಗಿಕ ಅಲ್ಪಸಂಖ್ಯಾತರು ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾ ಮಾಡಿತ್ತು.
ಖಾಸಗಿತನ ಮೂಲಭೂತ ಹಕ್ಕು : ಸುಪ್ರೀಂಕೋರ್ಟ್
ಆದರೆ 2017 ರಲ್ಲಿ ಸುಪ್ರೀಂಕೋರ್ಟ್ ಖಾಸಗಿ ತನ ಸಂವಿಧಾನ ಮೂಲಭೂತ ಹಕ್ಕಾಗಿದೆ ಎಂದು ಮಹತ್ವದ ತೀರ್ಪು ನೀಡಿತ್ತು. ಇದು ಲೈಂಗಿಕ ಅಲ್ಪಸಂಖ್ಯಾತರ ಕಾನೂನು ಹೋರಾಟಕ್ಕೆ ಬಲ ನೀಡಿತ್ತು. ಇದೇ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದ ಸಂಘಟನೆಗಳು ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಭ್ರಮಾಚರಣೆ:
ಸುಪ್ರೀಂಕೋರ್ಟ್ನಿಂದ ತೀರ್ಪು ಹೊರಬೀಳುತ್ತಿದ್ದಂತೆಯೇ ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಸಲಿಂಗಕಾಮ ಹಕ್ಕಿಗಾಗಿ ಹೋರಾಟ ಮಾಡಿದವರು ಸಂಭ್ರಮಾಚರಣೆ ಮಾಡಿದರು.
ಕರಣ್ ಜೋಹರ್, ಶಶಿ ತರೂರ್, ಚೇತನ ಭಗತ್ ಮುಂತಾದವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ.