ಹೈದರಾಬಾದ್: ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಅವರ ಸರ್ಕಾರ ವಿಸರ್ಜನೆಯ ನಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ವಿಧಾನಸಭೆ ವಿಸರ್ಜನೆ ಕುರಿತು ನಾಳೆ ಸಿಎಂ ಕೆಸಿಆರ್ ನಿರ್ಧಾರ ಕೈಗೊಳ್ಳಲಿದ್ದಾರೆ.
ನಾಳೆ ಬೆಳಗ್ಗೆ 6:45ಕ್ಕೆ ಕೆಸಿಆರ್ ಸಚಿವ ಸಂಪುಟವು ಮಹತ್ವದ ಸಭೆ ನಡೆಸಲಿದ್ದು, ಆನಂತರ ವಿಧಾನಸಭೆ ವಿಸರ್ಜನೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದರೆ ಕೆಸಿಆರ್ ಸರ್ಕಾರ ಇನ್ನು ಒಂದೇ ದಿನ ದಿನ ಅಸ್ತಿತ್ವದಲ್ಲಿ ಇರಲಿದ್ದು, ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ ಎನ್ನಲಾಗ್ತಿದೆ.
ಇದಕ್ಕೆ ಪೂರಕವಾಗಿ ಮತ್ತೊಂದು ಮಾಹಿತಿ ಕೇಳಿಬಂದಿದ್ದು, ತರಾತುರಿಯಲ್ಲಿ ಎಲ್ಲಾ ಪ್ರಮುಖ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವೇಮುಲವಾಡದ ಎಂಎಲ್ಎ ರಮೇಶ್ ಅವರು ಮೂರು ದಿನಕ್ಕೂ ಮುನ್ನವೇ 1.56 ಕೋಟಿ ಮೊತ್ತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದಿದ್ದಾರೆ. ಅಲ್ಲದೆ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯು ಪಕ್ಷದ ಎಲ್ಲಾ ಎಂಎಲ್ಎಗಳಿಗೆ ಅವರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಹಣದ ಪ್ರಸ್ತಾವನೆಯನ್ನು ಸಲ್ಲಿಸುವಂತೆಯೂ ಕೇಳಿದೆ. ಎಂಎಲ್ಎಗಳು ಇದೇ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದೂ ತಿಳಿದುಬಂದಿದೆ.
ಈ ಎಲ್ಲಾ ಕಾರ್ಯಗಳಿಗೂ 48 ಗಂಟೆಗಳ ಗಡುವು ನೀಡಲಾಗಿತ್ತು ಎಂದೂ ಹೇಳಲಾಗುತ್ತಿದೆ. ನಾಳೆ ಬೆಳಗ್ಗೆ 6:45ಕ್ಕೆ ಸಭೆ ನಡೆಸುವ ಸಭೆ ಬಳಿಕ ತೆಲಂಗಾಣ ಸರ್ಕಾರದ ಸಚಿವ ಸಂಪುಟ ಸದಸ್ಯರು ರಾಜ್ಯಪಾಲ ನರಸಿಂಹನ್ ಅವರನ್ನು ಭೇಟಿಯಾಗಿ ವಿಧಾನಸಭೆ ವಿಸರ್ಜಿಸುವಂತೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.