ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇವತ್ತು ನಡೆಯಲಿದ್ದು, ಶಿರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.
ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮಕ್ಕೆ ಏರ್ಪಾಟು ಮಾಡಿಕೊಂಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ಮಠದಲ್ಲಿರುವ ಮುಖ್ಯಪ್ರಾಣ ದೇವರು, ಅನ್ನವಿಠಲ ದೇವರಿಗೆ ಎಳನೀರಿನ ಅಭಿಷೇಕ ನಡೆಯಲಿದೆ. ಆರಾಧನಾ ಪ್ರಕ್ರಿಯೆಯ ನಂತರ ಸುಮಾರು 300 ಜನರಿಗೆ ಅನ್ನದಾನ ನಡೆಯಲಿದೆ. ಕಾಪು ತಾಲೂಕಿನ ಹಿರಿಯಡ್ಕ ಸಮೀಪದ ಶಿರೂರು ಗ್ರಾಮದಲ್ಲಿ ಈ ಎಲ್ಲಾ ವಿಧಿವಿಧಾನ ನಡೆಯುತ್ತಿದ್ದು, ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಆರಾಧನಾ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದೆ.
ಜುಲೈ 19 ರಂದು ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ 13 ನೇ ದಿನಕ್ಕೆ ಆರಾಧನೆ ನಡೆಯಬೇಕಿತ್ತು. ಆದರೆ ವಾರದ ಹಿಂದೆಯಷ್ಟೇ ಪೊಲೀಸರು ಮೂಲಮಠವನ್ನು ದ್ವಂದ್ವ ಸೋದೆ ಮಠಕ್ಕೆ ಬಿಟ್ಟುಕೊಟ್ಟಿದ್ದರು. ಪ್ರಕರಣ ತನಿಖೆ ಹಂತದಲ್ಲಿ ಇದ್ದುದರಿಂದ ಆರಾಧನಾ ಪ್ರಕ್ರಿಯೆ ವಿಳಂಬವಾಗಿದೆ.