ಹೈದರಾಬಾದ್: 2007ರಲ್ಲಿ ಹೈದರಾಬಾದ್ ನ ಗೋಕುಲ್ ಚಾಟ್ ಮತ್ತು ಲುಂಬಿನಿ ಉದ್ಯಾನದ ಬಳಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ದೋಷಿಗಳು ಎಂದು ನಾಂಪಲ್ಲಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಬಂಧಿತ ಆರೋಪಿಗಳಾದ ಅನೀಕ್ ಶಫೀಕ್ ಸೈಯದ್ ಮತ್ತು ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ದೋಷಿಗಳಾಗಿದ್ದು, ಇನ್ನಿಬ್ಬರು ಆರೋಪಿಗಳಾದ ಫರೂಖ್ ಶರ್ಫುದ್ದೀನ್ ತರ್ಕಾಶ್, ಮೊಹಮ್ಮದ್ ಸಾದಿಕ್ ಇಸ್ರಾರ್ ಅಹ್ಮದ್ ಶೇಕ್ ದೋಷಮುಕ್ತರಾಗಿದ್ದಾರೆ. ಐದನೇ ಆರೋಪಿ ತಾರಿಕ್ ಅಂಜುಮ್ ಕುರಿತ ತೀರ್ಪು ಮತ್ತು ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇದೇ 10ಕ್ಕೆ ಪ್ರಕಟಿಸಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದವರು ತನಿಖೆ ನಡೆಸಿದ್ದು ಐವರು ಆರೋಪಿಗಳನ್ನು ಬಂಧಿಸಿತ್ತು. ಇಂಡಿಯನ್ ಮುಜಾಹಿದ್ದೀನ್ ಜೊತೆಗೆ ಒಡನಾಟ ಇರುವ ಕುರಿತು ದೂರಿನಲ್ಲಿ ಉಲ್ಲೇಖಿಸಿತ್ತು. ಅವರ ವಿರುದ್ಧ ನಾಲ್ಕು ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ತಲೆಮರೆಸಿಕೊಂಡಿರುವ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ವಿರುದ್ಧವೂ ಆರೋಪ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಆರೋಪಿಗಳಾಗಿರುವವರ ವಿಚಾರಣೆಯನ್ನು ನಾಂಪಲ್ಲಿ ನ್ಯಾಯಾಲಯ ಸಮುಚ್ಚಯದಿಂದ ಚೆರ್ಲಪಲ್ಲಿ ಕೇಂದ್ರೀಯ ಕಾರಾಗೃಹದ ಆವರಣದಲ್ಲಿರುವ ನ್ಯಾಯಾಲಯಕ್ಕೆ ಜೂನ್ ತಿಂಗಳಲ್ಲಿ ಸ್ಥಳಾಂತರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 2013ರಲ್ಲಿ ಮೆಟ್ರೊಪೊಲಿಟನ್ ಸೆಷನ್ಸ್ ನ್ಯಾಯಾಲಯವು ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರೆನ್ನಲಾದ ಅನೀಖ್ ಶಫೀಕ್ ಸಯ್ಯದ್, ಮೊಹಮ್ಮದ್ ಸಾದೀಕ್, ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನ್ಸರ್ ಅಹಮ್ಮದ್ ಬಾದ್ಶಾ ಶೇಕ್ ವಿರುದ್ಧ ಆರೋಪ ಹೊರಿಸಿತ್ತು. ಈ ಆರೋಪಿಗಳನ್ನು ಚೆರ್ಲಪಲ್ಲಿ ಕೇಂದ್ರೀಯ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಪ್ರಕರಣ ತನಿಖೆ ವೇಳೆ 160 ಸಾಕ್ಷಿಗಳನ್ನು ವಿಚಾರಣೆಗೆ ಮತ್ತು ಮರ ಪರಿಶೀಲನೆಗೆ ಒಳಪಡಿಸಲಾಗಿತ್ತು.
2007ರ ಆಗಸ್ಟ್ 25ರಂದು ಐದು ನಿಮಿಷದ ಅಂತರದಲ್ಲಿ ಹೈದರಾಬಾದ್ನ ಪ್ರಸಿದ್ಧ ಹೋಟೆಲ್ ಗೋಕುಲ್ ಚಾಟ್ ಹಾಗೂ ಲುಂಬಿನಿ ಉದ್ಯಾನದ ಬಳಿ ಬಾಂಬ್ ಸ್ಫೋಟವಾಗಿತ್ತು. ಸ್ಫೋಟದ ಬಳಿಕ ನಗರದಲ್ಲಿ ಎರಡು ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಸ್ಫೋಟದಲ್ಲಿ 44 ಮಂದಿ ಮೃತಪಟ್ಟಿದ್ದರೆ, 68 ಮಂದಿ ಗಾಯಗೊಂಡಿದ್ದರು.