ಹೈದರಾಬಾದ್: 2007ರಂದು ಗೋಕುಲ್ ಚಾಟ್ ಹಾಗೂ ಲುಂಬಿನಿ ಪಾರ್ಕ್ ಬಳಿ ನಡೆದಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದ ಕುರಿತಂತೆ ನಾಂಪಲ್ಲಿ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ತೀರ್ಪಿನಲ್ಲಿ ಇಬ್ಬರನ್ನು ಅಪರಾಧಿಗಳೆಂದು ಘೋಷಿಸಲಾಗಿದ್ದು, ಇಬ್ಬರು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಪ್ರಕರಣ ಸಂಬಂಧ ಅನೀಕ್ ಶಫೀಕ್ ಸೈಯ್ಯದ್, ಅಕ್ಬರ್ ಇಸ್ಮಾಯಿಲ್ ಚೌಧರಿಯನ್ನು ಅಪರಾಧಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಫರೂಕ್ ಶರ್ಫುದ್ದೀನ್ ತರ್ಕಿಶ್ ಮತ್ತು ಮೊಹಮದ್ ಸಾದಿಕ್ ಇಸ್ರಾರ್ ಶೇಖ್ರನ್ನು ಖುಲಾಸೆಗೊಳಿಸಿದೆ. ಉಳಿದಂತೆ ಒಬ್ಬ ಆರೋಪಿ ಬಗೆಗಿನ ತೀರ್ಪನ್ನು ಸೆಪ್ಟೆಂಬರ್ 10 ರಂದು ಪ್ರಕಟಿಸಲಿದೆ. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ರಿಯಾಜ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಳ್ ತಲೆಮರೆಸಿಕೊಂಡಿದ್ದಾರೆ.
2007ರಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ 42 ಮಂದಿ ಮೃತಪಟ್ಟಿದ್ದರು. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ತೆಲಂಗಾಣ ಪೊಲೀಸ್ನ ದಿ ಕೌಂಟರ್ ಆಫ್ ಇಂಟಲಿಜೆನ್ಸ್ ತಂಡವು ಪ್ರಕರಣದ ಬಗ್ಗೆ ತನಿಖೆ ನಡೆಸಿ, ತಲೆಮರೆಸಿಕೊಂಡಿರುವ ಆರೋಪಿಗಳೂ ಸೇರಿ ಮತ್ತೆ ಐವರ ಮೇಲೆ ಮೂರು ಚಾರ್ಜ್ಶೀಟ್ಗಳನ್ನು ಸಲ್ಲಿಸಿತ್ತು.
2008 ಅಕ್ಟೋಬರ್ನಲ್ಲಿ ಆರೋಪಿಗಳನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ತಂಡವು ಬಂಧಿಸಿತ್ತು. ಚೆರ್ಲಪಲ್ಲಿ ಜೈಲಿನಲ್ಲಿ ಐವರು ಆರೋಪಿಗಳನ್ನು ಇರಿಸಲಾಗಿತ್ತು.
2013 ಆಗಸ್ಟ್ನಲ್ಲಿ ಎರಡನೇ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ ಬಂಧಿತ ಅನೀಕ್ ಶಾಫಿಕ್ ಸೈಯದ್, ಮೊಹ್ಮದ್ ಸಾದಿಕ್, ಅಕ್ಬರ್ ಇಸ್ಮಾಯಿಲ್ ಚಂದರಿ ಹಾಗೂ ಅನ್ಸರ್ ಅಹ್ಮದ್ ಬಾದ್ಶಹ ಶೇಖ್ರನ್ನು ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರೆಂದು ಪ್ರಕಟಿಸಿ, ವಿವಿಧ ಸೆಕ್ಷನ್ಗಳಡಿ ಶಿಕ್ಷೆ ವಿಧಿಸಿತ್ತು. ಒಟ್ಟಾರೆ 171 ಸಾಕ್ಷಿಗಳನ್ನು ಪಡೆಯಲಾಗಿತ್ತು.