ಸರ್ಕಾರಕ್ಕೆ ಜನರಿಂದ ಸಹಮತ; ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಕೈಜೋಡಿಸಲ್ಲ

ಬೆಂಗಳೂರು: ರಾಜ್ಯದ ಜನ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂಬುದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶದಲ್ಲಿ ಸ್ಪಷ್ಟವಾಗಿದ್ದು, ಸರ್ಕಾರದ 100 ದಿನಗಳ ಆಡಳಿತ ಬೆಂಬಲಿಸಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಲ್ಲದೆ, ನಗರ ಪ್ರದೇಶದ ಜನ ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆಂಬ ಮಾತು ಇತ್ತಾದರೂ ಅದರ ಪ್ರಭಾವ ಕಡಿಮೆಯಾಗಿದೆ ಎಂಬುದು ಫ‌ಲಿತಾಂಶವನ್ನು ಪರಾಮರ್ಶೆ ಮಾಡಿದಾಗ ಗೊತ್ತಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಫ‌ಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ‌ಲಿತಾಂಶದ ಹಿನ್ನೆಲೆ ನೋಡಿದರೆ ಸಮ್ಮಿಶ್ರ ಸರ್ಕಾರಕ್ಕೆ ಜನತೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಭರಾಟೆಯ ಪ್ರಚಾರಕ್ಕೆ ಹೋಗಲಿಲ್ಲ. ಕಣದಲ್ಲಿರುವ ಪಕ್ಷಗಳ ಅಭ್ಯರ್ಥಿಗಳೇ ಚುನಾವಣೆ ನಡೆಸಲಿ ಎಂದು ಎರಡೂ ಪಕ್ಷದ ನಾಯಕರು ತೀರ್ಮಾನ ಕೈಗೊಂಡಿದ್ದರು. ಬಿಜೆಪಿಯವರಂತೆ ನಾಯಕರು ಜಿಲ್ಲೆಗಳನ್ನು ಹಂಚಿಕೆ ಮಾಡಿಕೊಂಡು ಹೋಗಿಲ್ಲ ಎಂದರು.

ಬೆಳಗಾವಿಯಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಅವರ ಸಹೋದರ ಸತೀಶ್‌ ಜಾರಕಿಹೊಳಿ ತಮ್ಮ ಕ್ಷೇತ್ರಗಳಲ್ಲಿ
ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿರುವುದರ ಬಗ್ಗೆ ತಪ್ಪು ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ಇದೇನೂ ಅವರಿಬ್ಬರು ಹೊಸದಾಗಿ ತೆಗೆದುಕೊಂಂಡ ನಿರ್ಧಾರವಲ್ಲ. ಬೆಳಗಾವಿ ರಾಜಕಾರಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪಕ್ಷೇತರರಾಗಿ ಎದುರಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ವಿಚಾರದಲ್ಲಿ
ಅವರಿಬ್ಬರ ಬಗ್ಗೆ ಯಾವುದೇ ಅಪನಂಬಿಕೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಜತೆ ಕೈಜೋಡಿಸುವುದಿಲ್ಲ: ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಪರಿಸ್ಥಿತಿ ಉದ್ಭವವಾಗಿದ್ದು, ಇಂತಹ ಕಡೆ ಸಮ್ಮಿಶ್ರ ಸರ್ಕಾರದ ಮಾದರಿಯಲ್ಲೇ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲಾಗುವುದು.ಯಾವುದೇ ಭಾಗದಲ್ಲಿ ಬಿಜೆಪಿ ಜತೆ ಕೈಜೋಡಿಸುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರ ಇದ್ದರೂ ಬಿಜೆಪಿ ಸಾಕಷ್ಟು ಕಡೆ ಗೆದ್ದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇವಲ
100 ದಿನಗಳಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಿ ಕ್ಲೀನ್‌ ಸ್ವೀಪ್‌ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ಬರಲಿ, ನಾಡಿನ ಜನರ ಬೆಂಬಲದೊಂದಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎಲ್ಲಾ ಕ್ಷೇತ್ರಗಳಲ್ಲೂ ಕ್ಲೀನ್‌ ಸ್ವೀಪ್‌ ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ