ಜಾರಕಿಹೊಳಿ ಆಟಕ್ಕೆ `ಕೈ’ ನಾಯಕರು ಸುಸ್ತು- ಲೋಕಲ್ ಫೈಟ್ ನಲ್ಲಿ ಕೊಟ್ರು ಹೊಸ ಟ್ವಿಸ್ಟ್

ಬೆಂಗಳೂರು/ಬೆಳಗಾವಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ.

`ಕೈ’ ಹೈಕಮಾಂಡ್‍ಗೆ ಕಗ್ಗಂಟಾಗಿರುವ ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಲೋಕಲ್ ಫೈಟ್ ಮೂಲಕ ಹೊಸ ವರಸೆ ತೋರಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಗಲಾಟೆ ಮಧ್ಯೆಯೇ ರಮೇಶ್ ಜಾರಕಹೊಳಿ ಮತ್ತೊಂದು ಆಟ ಆರಂಭಿಸಿದ್ದು, ಲೋಕಲ್ ಫೈಟ್‍ನಲ್ಲಿ ಪಕ್ಷಕ್ಕೆ ಬಿ ಫಾರಂ ನೀಡದೇ ಪಕ್ಷೇತರರನ್ನ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗಿನ ಗಲಾಟೆಯ ವಿವಾದದ ಬೆನ್ನಲ್ಲೇ ಈಗ ಪಕ್ಷಕ್ಕಿಂತ ನಾನೇ ಪವರ್ ಫುಲ್ ಎಂಬಂತೆ ಪಕ್ಷೇತರರನ್ನ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಹೊಸ ವಿವಾದ ಹುಟ್ಟುಹಾಕಿದ್ದಾರೆ. ಗೋಕಾಕ್ ನಗರಸಭೆ ಹಾಗೂ ಕಣ್ಣೂರು ಪುರಸಭೆಯಲ್ಲಿ ತಮ್ಮ ಬೆಂಬಲಿಗರರನ್ನ ಪಕ್ಷೇತರರನ್ನಾಗಿ ಗೆಲ್ಲಿಸಿಕೊಂಡ ರಮೇಶ್ ಜಾರಕಿಹೋಳಿಯದ್ದು ಪಕ್ಷ ವಿರೋಧಿ ನಡೆ ಎಂದು ವಿರೋಧಿ ಪಡೆ ಅಖಾಡಕ್ಕಿಳಿಯೋದು ಪಕ್ಕಾ ಆಗಿದೆ.

ಪಕ್ಷದಲ್ಲಿ ಶಿಸ್ತು ಅಂದರೆ ಎಲ್ಲರಿಗು ಒಂದೆ ಆಗಿರುತ್ತದೆ. ಆದರೆ ಇವರು ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪು ಅನ್ನುವ ಪಕ್ಷದ ನಾಯಕರುಗಳ ನಡೆಯ ಬಗ್ಗೆಯೇ ಕಾಂಗ್ರೆಸ್ ವಲಯದಲ್ಲಿ ಅಸಮಧಾನ ಉಂಟಾಗಲು ಕಾರಣವಾಗಿದೆ. ಇದೊಂದೇ ವಿವಾದ ಕಾಂಗ್ರೆಸ್ ಪಕ್ಷದ ಶಿಸ್ತು ತಪ್ಪಿಸೋದು ಗ್ಯಾರಂಟಿಯಾಗಿದೆ.

ಚುನಾವಣಾ ಫಲಿತಾಂಶದಲ್ಲಿ ಗೋಕಾಕ್‍ನಲ್ಲಿ ಪಕ್ಷೇತರರಾಗಿ 30 ಮಂದಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಗೆಲುವು ಸಾಧಿಸಿದ್ದು, 1 ಬಿಜೆಪಿ, 30 ಮಂದಿ ಪಕ್ಷೇತರರ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಕೊಣ್ಣೂರು ಪುರಸಭೆಯಲ್ಲೂ 23 ಸದಸ್ಯ ಬಲದಲ್ಲಿ 23 ಮಂದಿ ಪಕ್ಷೇತರರು ಜಯಗಳಿಸಿದ್ದರು. ಖಾನಾಪುರ ಪಟ್ಟಣ ಪಂಚಾಯ್ತಿಯಲ್ಲಿ ಕೂಡ ರಮೇಶ್ ಬೆಂಬಲಿಗರಾದ ಪಕ್ಷೇತರ 20 ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಈ ಮೂಲಕ ಪಕ್ಷ ಬಿಟ್ಟರೂ ಯಾವುದೇ ಧಕ್ಕೆ ಆಗದಂತೆ ಸಚಿವರು ಪ್ಲಾನ್ ಮಾಡಿದ್ರಾ ಎಂಬ ಪ್ರಶ್ನೆಯೊಂದು ಮೂಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ