ಬೆಂಗಳೂರು, ಸೆ.2-ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸೆ, ಭಯ, ನಿರುದ್ಯೋಗ, ಹಸಿವು ಮುಕ್ತ ಬದುಕಿಗಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಸೆ.4ರಂದು ದೆಹಲಿ ಚಲೋ ಹಮ್ಮಿಕೊಂಡಿದೆ.
ದೇಶದ 23 ರಾಜ್ಯಗಳಲ್ಲಿ 1.12 ಕೋಟಿ ಸದಸ್ಯತ್ವವನ್ನು ಹೊಂದಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಭಯ, ನಿರುದ್ಯೋಗ, ಹಸಿವಿನಿಂದ ಮುಕ್ತ ಆಗ್ರಹಿಸಿ, ಸೆ.4ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದೆ.
ಅಂದು ಬೆಳಗ್ಗೆ 11 ಗಂಟೆಗೆ ಮಂಡಿಹೌಸ್‍ನಿಂದ ಹೊರಟು ಪಾರ್ಲಿಮೆಂಟ್ ಸ್ಟ್ರೀಟ್ ತಲುಪಿ ಬಹಿರಂಗ ಸಭೆ ನಡೆಯಲಿದೆ. ಈ ಹೋರಾಟವನ್ನು ಉದ್ದೇಶಿಸಿ ಹಲವು ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಕುಟುಂಬದ ಸದಸ್ಯರು ಮಾತನಾಡಲಿದ್ದಾರೆ.
ಮಹಿಳೆ ಮತ್ತು ಯುವತಿಯರನ್ನು ಕೇಂದ್ರೀಕರಿಸಿ ದೇಶವ್ಯಾಪಿಯಾಗಿ ನಡೆಯುತ್ತಿರುವ ಹಿಂಸೆ ಮತ್ತು ದೌರ್ಜನ್ಯಗಳು ಆತಂಕವನ್ನು ಹೆಚ್ಚಿಸಿದೆ. ದೈಹಿಕ ಮತ್ತು ಮಾನಸಿಕ ಹಿಂಸೆ, ಸಾಮೂಹಿಕ ಅತ್ಯಾಚಾರ, ಕೊಲೆಗಳು, ವರದಕ್ಷಿಣೆ ಕೊಲೆಗಳು, ಕೌಟುಂಬಿಕ ಹಿಂಸೆ ಇವೆಲ್ಲವೂ ಈ ವ್ಯವಸ್ಥೆಯ ಭಾಗವಾಗಿಯೇ ನಡೆಯುತ್ತಿವೆ.
ಇವುಗಳನ್ನು ಪ್ರತ್ಯೇಕಿಸಿ ನೋಡುವ ಮನೋಭಾವವನ್ನು ಬಿಟ್ಟು ಇದು ಸಮಾಜದ ಒಟ್ಟು ಸಮಸ್ಯೆಗಳ ಭಾಗವೆಂದು ಸರಕಾರ ಅರ್ಥ ಮಾಡಿಕೊಳ್ಳಬೇಕಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ರಾಜಕೀಯ ಪ್ರೇರಿತ ಶಕ್ತಿಗಳು ಮಹಿಳೆಯರನ್ನು ಅತ್ಯಂತ ವ್ಯವಸ್ಥಿತವಾಗಿ ಮೂಲೆಗೆ ಸರಿಸಲು ಈ ಮಹಿಳಾ ವಿರೋಧಿ ದಾಳಿಗಳನ್ನು ಮಾಡುತ್ತಿರುವುದನ್ನು ಖಂಡಿಸಿ ಈ ಪ್ರತಿಭಟನಾ ರ್ಯಾಲಿ ನಡೆಯುತ್ತಿದೆ.
ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ಮಹಿಳಾ ವಿರೋಧಿ ನಡೆಯ ವಿರುದ್ಧ ದೇಶವ್ಯಾಪಿಯಾಗಿ ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಸೆ.4ರಂದು ದೆಹಲಿ ಚಲೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹೋರಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ವಿವಿಧ ಜಿಲ್ಲೆಗಳಿಂದ ನೂರಾರು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ.