ರಾಬರ್ಟ್‌ ವಾದ್ರಾ, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ವಿರುದ್ಧ ಎಫ್ ಐಆರ್

ನವದೆಹಲಿ: ಭೂ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಡಿಎಲ್‌ಎಫ್‌ ಮತ್ತು ಓಂಕಾರೇಶ್ವರ ಪ್ರಾಪರ್ಟೀಸ್‌ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ. ‘ನೂಹ್‌ ನಿವಾಸಿ ಸುರಿಂದರ್‌ ಶರ್ಮಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ವಾದ್ರಾ ಅವರಿಗೆ ಸೇರಿದ ಸ್ಕೈ ಲೈಟ್‌ ಹಾಸ್ಪಿಟಾಲಿಟಿ ಕಂಪನಿ ಗುರುಗ್ರಾಮ ಸೆಕ್ಟರ್‌ 83, ಶಿಕೊಪುರ, ಸಿಕಂದರ್‌ಪುರ, ಖೇದಿ ದೌಲಾ ಮತ್ತು ಸಿಹಿಯಲ್ಲಿ 7.5 ಕೋಟಿಗೆ ಭೂಮಿ ಖರೀದಿಸಿದೆ. ಬಳಿಕ ಅದನ್ನು 55 ಕೋಟಿಗೆ ಮಾರಾಟ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

2010–11ರಲ್ಲಿ ಹರಿಯಾಣ ಮತ್ತು ರಾಜಸ್ಥಾನದಲ್ಲಿ ಸ್ಕೈ ಲೈಟ್‌ ಹಾಸ್ಪಿಟಾಲಿಟಿ ಕಂಪೆನಿ ನಡೆಸಿದ ಭೂವ್ಯವಹಾರಗಳಿಂದ ಗಳಿಸಿದ ಲಾಭಕ್ಕೆ ಸಂಬಂಧಿಸಿದಂತೆ ಮರು ಲೆಕ್ಕಪತ್ರ ವಿವರ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆ ವಾದ್ರಾ ಅವರ ಕಂಪೆನಿಗೆ ನೋಟಿಸ್‌ ನೀಡಿತ್ತು. ಇದನ್ನು ಪ್ರಶ್ನಿಸಿ ಸ್ಕೈಲೈಟ್‌ ಕಂಪೆನಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ, ಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶದ ವಿರುದ್ಧ ಕಂಪೆನಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್ ಆದೇಶದಲ್ಲಿ ಮಧ್ಯೆ ಪ್ರವೇಶಿಸಲು 2018ರ ಎಪ್ರಿಲ್‌ನಲ್ಲಿ ನಿರಾಕರಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾದ್ರಾ, ಚುನಾವಣೆ ಸಂದರ್ಭದಲ್ಲಿ ಜನರನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ನಡೆಸುತ್ತಿರುವ ಯತ್ನವಿದು, ತೈಲ ಬೆಲೆ ಹೆಚ್ಚಳ ಸಂಗತಿಗಳ ಬಗ್ಗೆ ಸರ್ಕಾರ ಗಮನ ಹರಿಸುವುದನ್ನು ಬಿಟ್ಟು ಬೇರೆ ವಿಷಯಗಳ ಕುರಿತು ಪ್ರಸ್ತಾಪಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ