ಬೆಂಗಳೂರು, ಆ.30-ಮೇಕೆದಾಟು ಬಳಿ ಕುಡಿಯುವ ನೀರಿನ ಉದ್ದೇಶದ ಜಲಾಶಯವನ್ನು ನಿರ್ಮಿಸುವುದು ಸರ್ಕಾರದ ಮೊದಲ ಆದ್ಯತೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಉದ್ದೇಶಿತ ಯೋಜನೆಗೆ ಅನುಮತಿ ದೊರೆತ ಕೂಡಲೇ ತ್ವರಿತ ಅನುಷ್ಠಾನಗೊಳಿಸಲಾಗುವುದು ಎಂದರು.
67 ಟಿಎಂಟಿ ಅಡಿ ಸಾಮಥ್ರ್ಯದ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ. ಜಲಾಶಯ ನಿರ್ಮಿಸಿದ ಬಳಿಕ ಕುಡಿಯುವ ನೀರಿಗೆ ಬಳಕೆಯಾಗುವ ನೀರನ್ನು ಹೊರತು ಪಡಿಸಿ ಉಳಿದ ನೀರನ್ನು ತಮಿಳುನಾಡಿಗೆ ಬಿಡಲು ಅನುಕೂಲವಾಗಲಿದೆ.
ಪ್ರತಿ ತಿಂಗಳು ನೀರು ಬಿಡಬೇಕಾಗಿರುವ ನೀರು ಹಾಗೂ ನ್ಯಾಯಾಲಯದ ಆದೇಶ ಪಾಲನೆಗೂ ಅನುಕೂಲವಾಗಲಿದೆ. ಸುಮಾರು 4 ಸಾವಿರ ಎಕರೆಯಷ್ಟು ಅರಣ್ಯ, ಕೃಷಿ , ಕಂದಾಯ ಭೂಮಿ ಯೋಜನಾ ವ್ಯಾಪ್ತಿಗೆ ಒಳಪಡಲಿದೆ. ಪ್ರಸಕ್ತ ವರ್ಷದಲ್ಲಿ ಈಗಾಗಲೇ ತಮಿಳುನಾಡಿಗೆ ಕಾವೇರಿ ನದಿಯಿಂದ 310 ಟಿಎಂಸಿ ಅಡಿ ನೀರು ಹರಿದು ಹೋಗಿದೆ. ಇದುವರೆಗೂ ಬಿಡಬೇಕಾಗಿದ್ದ ನೀರಿನ ಪ್ರಮಾಣ 82 ಟಿಎಂಸಿ ಅಡಿಗಳು ಮಾತ್ರ. ಮೇಕೆದಾಟು ಯೋಜನೆಗೆ ಸುಮಾರು 6 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ಹೇಳಿದರು.
ಜಾಗೃತದಳ ರಚನೆ:
ನಾಲೆಗಳಲ್ಲಿ ನೀರಿನ ದುರ್ಬಳಕೆ ತಡೆಯಲು ಜಾಗೃತ ದಳವನ್ನು ರಚಿಸುವ ಉದ್ದೇಶವಿದೆ. ನಾಲ್ಕು ನೀರಾವರಿ ನಿಗಮಗಳಿಗೂ ತಲಾ ಒಂದೊಂದು ಜಾಗೃತದಳ ರಚನೆ ಮಾಡುವ ಸಂಬಂಧ ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ತಾವು ಹಾಗೂ ಗೃಹ ಸಚಿವರು ಈ ಬಗ್ಗೆ ಸಮಾಲೋಚನೆ ನಡೆಸಿ ನಾಲೆಯ ಕಡೆಯ ಭಾಗದ ರೈತರಿಗೂ ನೀರು ದೊರೆಯುವಂತೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಸ್ಥಳ ಪರಿಶೀಲನೆ:
ಮಹದಾಯಿ, ಮೇಕೆದಾಟು, ಸಂಗಂ, ಶಿವನಸಮದ್ರ, ಕೆಆರ್‍ಎಸ್ ಜಲಾಶಯಗಳಿಗೆ ಭೇಟಿನೀಡಿ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದರು.
ಕೆರೆ ತುಂಬಿಸಲು ಕೂಡ ಆದ್ಯತೆ ನೀಡಲಾಗುವುದು. ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನೀರಾವರಿ ತಜ್ಞರು, ನೀರಾವರಿ ಹೋರಾಟಗಾರರು ಸೇರಿದಂತೆ 146 ಮಂದಿಯಿಂದ ಸಲಹೆ ಪಡೆಯಲಾಗಿದ್ದು, ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯದಲ್ಲೇ ಒಂದು ಉಪನ್ಯಾಸ ಕಾರ್ಯಕ್ರಮವನ್ನು ಕೂಡ ನಡೆಸಲಾಗುವುದು ಎಂದರು.
ಈ ಬಾರಿ ಪ್ರಮುಖ ಜಲಾಶಯಗಳು ಗರಿಷ್ಠ ಮಟ್ಟದಲ್ಲಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಜಲಾಶಯಗಳ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ನೀರಿನ ಸಂಗ್ರಹ, ಜಲಾಶಯಗಳಲ್ಲಿ ಗರಿಷ್ಠ, ಕನಿಷ್ಠ ಪ್ರಮಾಣದ ಅಳತೆ, ಜಲಾಶಯಗಳ ಸುರಕ್ಷತೆ, ಒತ್ತುವರಿ ಎಲ್ಲಾ ವಿಚಾರಗಳು ತಿಳಿಯಬಹುದಾಗಿದೆ. ಆಸ್ತಿ ರಕ್ಷಣೆಯನ್ನೂ ಮಾಡಬಹುದು, ನಾಲೆಗಳ ಅಗಲೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳೀದರು.
ಜನಸ್ನೇಹಿ ಸರ್ಕಾರ:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುರಕ್ಷಿತವಾಗಿ 100 ದಿನಗಳನ್ನು ಪೂರೈಸಿದೆ. ಸಣ್ಣ ಅಹಿತಕರ ಘಟನೆಯೂ ನಡೆದಿಲ್ಲ. ಸರ್ಕಾರ ಉತ್ತಮವಾಗಿ ಆಡಳಿತ ನಿರ್ವಹಣೆ ಮಾಡುತ್ತಿದೆ. ವಿರೋಧ ಪಕ್ಷ ಮೊದಲ ದಿನವೇ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಭಟನೆ ಮಾಡುವ ಘೋಷಣೆ ಮಾಡಿತ್ತು. ಆದರೆ ರಾಜ್ಯದ ಸಮ್ಮಿಶ್ರ ಸರ್ಕಾರ ಜನಸ್ನೇಹಿ ಸರ್ಕಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷ ಚುನಾವಣೆಗೆ ಸಂಬಂಧಿಸಿದಂತೆ ಜಾಹೀರಾತು ನೀಡಿದೆ. ಅದು ಆ ಪಕ್ಷದ ಜಾಹೀರಾತು, ನಮ್ಮ ಪಕ್ಷದ ಜಾಹೀರಾತನ್ನು ನಾವು ನೀಡುತ್ತೇವೆ ಎಂದು ಹೇಳಿದರು.