ವಾಷಿಂಗ್ಟನ್ : ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸುವುದಿಲ್ಲ ಎಂಬುದನ್ನು ಭಾರತ ಪಾಕ್ ನೂತನ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕ್ ರಾಯಭಾರಿ ಮಲೀಹಾ ಲೋಧಿ ಕಾಶ್ಮೀರ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾಗಿರುವ, ರಾಯಭಾರಿ ಸೈಯದ್ ಅಕ್‌ಬರುದ್ದೀನ್, ಪಾಕ್ ಹೊಸ ಸರಕಾರ ಭಾರತದ ವಿರುದ್ಧ ಅನಗತ್ಯ ವಾಕ್ಸಮರದಲ್ಲಿ ನಿರತವಾಗುವ ಬದಲು ದಕ್ಷಿಣ ಏಶ್ಯ ಪ್ರಾಂತ್ಯವನ್ನು ಭಯೋತ್ಪಾದನೆ ಮತ್ತು ಹಿಂಸೆಯಿಂದ ಪಕ್ಷಗೊಳಿಸುವ ದಿಶೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಹೊಸ ಸರ್ಕಾರ ದಕ್ಷಿಣ ಏಷ್ಯಾ ಪ್ರದೇಶವನ್ನು ಉಗ್ರಮುಕ್ತಗೊಳಿಸುವಲ್ಲಿ ಕಾರ್ಯನಿರತವಾಗುತ್ತದೆ ಎಂದು ಆಶಾಭಾವನೆ ಹೊಂದಿದ್ದೇವೆ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಣ ವಿವಾದಭರಿತ ಪ್ರಾಂತ್ಯಗಳ ಕುರಿತು ಪಾಕಿಸ್ತಾನ ಪದೇಪದೇ ಉಲ್ಲೇಖ ಮಾಡುತ್ತಿರುವ ಬಗ್ಗೆ ಕಟುವಾಗಿ ತಿರುಗೇಟು ನೀಡಿದ ಅಕ್ಬರುದ್ದೀನ್, ಪ್ರತ್ಯೇಕ ನಿಯೋಗ ಭಾರತದ ಆಂತರಿಕ ಭಾಗವನ್ನು ಉಲ್ಲೇಖ ಮಾಡುತ್ತಿದೆ ಇದು ಸರಿಯಲ್ಲ ಎಂದು ಹೇಳಿದರು.