ನವದೆಹಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ಶೇ.2 ರಷ್ಟು ಹೆಚ್ಚುವರಿಯಾಗಿ ತುಟ್ಟಿಭತ್ಯೆ ನೀಡಲು ನಿರ್ಧರಿಸಿದ್ದು, ಇದರಿಂದ ಒಟ್ಟು 1.1 ಕೋಟಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಹಾಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ನಿರ್ಧಾರ ಕೈಗೊಂಡಿದ್ದು, 2018 ಜುಲೈ 1ರಿಂದ ಪೂರ್ವಾನ್ವಯವಾಗುಂತೆ ಜಾರಿಯಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರಿ ನೌಕರರು ಶೇ.7ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದು, ಈಗ ಈ ಪ್ರಮಾಣ ಶೇ.9ಕ್ಕೆ ಏರಿಕೆಯಾಗಿದೆ.
7ನೇ ವೇತನ ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿ ತುಟ್ಟಿಭತ್ಯೆ ಮತ್ತು ಪಿಚಣಿದಾರರ ತುಟ್ಟಿಭತ್ಯೆ ಪರಿಹಾರವನ್ನು(ಡಿಎಆರ್) ಏರಿಕೆ ಮಾಡಿದ್ದು, ಇದರಿಂದಾಗಿ 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 62.03 ಲಕ್ಷ ನಿವೃತ್ತಿ ವೇತನ ಪಡೆಯುವವರಿಗೆ ಅನುಕೂಲವಾಗಲಿದೆ. 2018-19ರ ಹಣಕಾಸು ವರ್ಷದಲ್ಲಿ ತುಟ್ಟಿಭತ್ಯೆ ಏರಿಕೆಯಿಂದ 6,112.20 ಕೋಟಿ ರೂ. ಮತ್ತು ಡಿಆರ್ ಏರಿಕೆಯಿಂದ 4,074.80 ಕೋಟಿ ರೂ. ಸರ್ಕಾರ ಬೊಕ್ಕಸಕ್ಕೆ ಹೊರೆಯಾಗಲಿದೆ.
ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ನೌಕರರು ಹಾಗೂ ಪಿಂಚಣಿದಾರರರಿಗೆ ತುಟ್ಟಿ ಭತ್ಯೆ ಸಿಗಲಿದ್ದು, ಇದು ನೌಕರರ ಮೂಲ ವೇತನದ ಮೇಲೆ ನಿಗದಿಯಾಗುತ್ತದೆ.