ಬೆಂಗಳೂರು, ಆ.26- ತಿಗಳರ ಸಮಾಜ ಸೇರಿದಂತೆ ಎಲ್ಲಾ ಹಿಂದುಳಿದ ಸಮಾಜಗಳು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಎಂದು ವೈದ್ಯಕೀಯ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಕರ್ನಾಟಕ ರಾಜ್ಯ ತಿಗಳರ ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘ ಆಯೋಜಿಸಿದ್ದ, ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಈ ಬಗ್ಗೆ ಸಮುದಾಯದ ನಾಯಕರು ಮಾಹಿತಿ ಪಡೆದು ತಮ್ಮ ಸಮಾಜದಲ್ಲಿರುವ ಬಡವರಿಗೆ ತಿಳಿಸಿಕೊಡಬೇಕು. ಆಗ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡ ನೆ.ಲ.ನರೇಂದ್ರಬಾಬು ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ತಿಗಳರ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಕೆಂಪಯ್ಯ ಮಾತನಾಡಿ, ಸಮುದಾಯದ ಎಸ್.ಸಿದ್ದಲಿಂಗಯ್ಯ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಬೇಕು. ಅಲ್ಲದೆ, ರಾಜ್ಯದಲ್ಲಿ 25ಲಕ್ಷ ರಷ್ಟು ಜನಸಂಖ್ಯೆ ತಿಗಳರ ಸಮುದಾಯವಿದ್ದು, ಈಗಲೂ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದೆ.ಈ ಜನಾಂಗದ ಯಾರಬ್ಬರೂ, ಉನ್ನತ ಸ್ಥಾನ ತಲುಪಿಲ್ಲ. ಹೀಗಾಗಿ, ಸಂಘವೂ, ಸಮುದಾಯದ ಅಭಿವೃದ್ಧಿ ಗಾಗಿ ದುಡಿಯುತ್ತಿದೆ ಎಂದು ಹೇಳಿದರು.
ಬೆಂಗಳೂರು ವಿವಿಯ ಉಪಕುಲಪತಿ ಡಾ.ವೇಣು ಗೋಪಾಲ್, ಎಸ್.ಎಂ.ಕೃಷ್ಣಪ್ಪ, ಕೆಪಿಟಿಸಿಎಲ್ ಎಚ್.ವಿ.ಮಾಲಿನಿ, ಸಾರಿಗೆ ಆಯುಕ್ತ ವಿರೂಪಾಕ್ಷ ಇಕ್ಕೇರಿ, ನ್ಯಾಯಧೀಶ ಹೆಚ್.ಆರ್.ರವಿಕುಮಾರ್ , ಶಿಕ್ಷಣ ಇಲಾಖೆ ನಂಜಯ್ಯ ಅವರನ್ನು ಸನ್ಮಾಯಿಸಲಾಯಿತು.