ನವದೆಹಲಿ: ಅಂತರಿಕ್ಷಯಾನ ವಿಜ್ಞಾನಿ ಜಿ. ಸತೀಶ್ ರೆಡ್ಡಿ ಅವರನ್ನು ಭಾರತದ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಧ್ಯಕ್ಷರನ್ನಾಗಿ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆ (ಡಿಡಿಆರ್&ಡಿ)ಯ ಕಾರ್ಯದರ್ಶಿಯನ್ನಾಗಿ ಶನಿವಾರ ನೇಮಕ ಮಾಡಲಾಗಿದೆ.
ಸಂಪುಟದ ನೇಮಕಾತಿ ಸಮಿತಿಯು ರೆಡ್ಡಿ ಅವರ ನೇಮಕಾತಿಗೆ ಅನುಮೋದನೆ ನೀಡಿದ್ದು, ಅಧಿಕಾರ ಸ್ವೀಕರಿಸಿದಾಗಿನಿಂದ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ.
ಸದ್ಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಜ್ಞಾನ ಸಲಹೆಗಾರರಾಗಿರುವ ರೆಡ್ಡಿ ಅವರು, ಕ್ಷಿಪಣಿ ಅಭಿವೃದ್ಧಿ, ಅಂತರಿಕ್ಷಯಾನ ತಂತ್ರಜ್ಞಾನ ಸಂಶೋಧನೆಯ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಜಿ.ಸತೀಶ್ ರೆಡ್ಡಿ ಆಂಧ್ರಪ್ರದೇಶದ ಜವಹರಲಾಲ್ ನೆಹರೂ ಟೆಕ್ನಲಾಜಿಕಲ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದರು. ಲಂಡನ್ನ ರಾಯಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾವಿಗೇಷನ್ನಲ್ಲಿ, ಯುಕೆಯ ರಾಯಲ್ ಏರೋನಾಟಿಕಲ್ ಸೊಸೈಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡಿದ್ದರು. ರಷ್ಯಾದ ಅಕಾಡೆಮಿ ಆಫ್ ನ್ಯಾವಿಗೇಷನ್ ಅಂಡ್ ಮೋಷನ್ ಕಂಟ್ರೋಲ್ನಲ್ಲಿ ವಿದೇಶಿ ಸದಸ್ಯರಾಗಿದ್ದರು. ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ, ಇಂಡಿಯನ್ ನ್ಯಾಷನಲ್ ಆಫ್ ಎಂಜಿನಿಯರಿಂಗ್, ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾ, ಯುಕೆಯ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಸಂಶೋಧನಾರ್ಥಿಯಾಗಿದ್ದರು. ಭಾರತದ ಹಾಗೂ ವಿದೇಶಗಳಲ್ಲಿ ಪ್ರೊಫೆಸರ್ ಆಗಿ, ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ನೀಡುವ ಪ್ರತಿಷ್ಠಿತ ಹೋಮಿ ಜಹಂಗೀರ್ ಬಾಬಾ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಇವರು ಯುಕೆಯ ರಾಯಲ್ ಏರೋನಾಟಿಕ್ ಸೊಸೈಟಿಯಿಂದ ಬೆಳ್ಳಿ ಪದಕ ಪಡೆದ ಮೊದಲ ಭಾರತದ ವಿಜ್ಞಾನಿಯಾಗಿದ್ದಾರೆ. ಭಾರತದ ಐಇಐ ಹಾಗೂ ಅಮೆರಿಕಾದ ಐಇಇಇಯ ಜಂಟಿ ಪ್ರಶಸ್ತಿಗೆ ಭಾಜನರಾದ ಮೊದಲಿಗರಾಗಿದ್ದಾರೆ.