ಮಂಗಳೂರು: ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮತ್ತಷ್ಟು ಭೂ-ಕುಸಿತವಾಗುವ ಸಾಧ್ಯತೆ ಹೆಚ್ಚಾಗಿರುವುದಾಗಿ ತಿಳಿದು ಬಂದಿದೆ.
ಹೌದು, ಕೊಡಗಿನ ಗಡಿಭಾಗದ ಗಾಳಿಬೀಡು, ವಣಚ್ಚಲ್ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು ಬಿಟ್ಟಿದ್ದಲ್ಲದೆ, ಹಲವು ಎಕರೆಗಟ್ಟಲೇ ಭೂ-ಕುಸಿತವಾಗಿರುವುದು ಬೆಳಕಿಗೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಆರ್ ಪಿಐ ಗಣೇಶ್ ಜೊತೆ ಸುಳ್ಯದ ಸ್ವಯಂ ಸೇವಕರ ತಂಡ ಬೆಟ್ಟದ ತುದಿಗೆ ತೆರಳಿದ್ದಾಗ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಹೀಗಾಗಿ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬೆಟ್ಟಗಳ ತಪ್ಪಲು ಪ್ರದೇಶದ ಜೋಡುಪಾಲ, ಮದೆನಾಡು ಮತ್ತು ಮೊಣ್ಣಂಗೇರಿ ಗ್ರಾಮಗಳಲ್ಲಿ ಭೂಕುಸಿತದಿಂದ ನೂರಾರು ಮನೆಗಳು ನೆಲ ಸಮವಾಗಿವೆ. ಅಲ್ಲದೇ ಸಮುದ್ರ ಮಟ್ಟದಿಂದ 5 ಸಾವಿರ ಅಡಿ ಎತ್ತರದಲ್ಲಿರುವ ನಿಸರ್ಗ ರಮಣೀಯ ತಾಣವೆಂದೇ ಬಣ್ಣಿಸುವ ಶೋಲಾ ಕಾಡುಗಳಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದ್ದು, ಸುತ್ತಮುತ್ತ ಗ್ರಾಮಗಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.