ಪಠ್ಯಕ್ರಮ ಆಧಾರಿತ ಶಿಕ್ಷಣಕ್ಕಿಂತ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ: ಅನಂತ್‍ಕುಮಾರ್ ಹೆಗಡೆ

 

ಬೆಂಗಳೂರು, ಆ.25- ಪಠ್ಯಕ್ರಮ ಆಧಾರಿತ ಶಿಕ್ಷಣವನ್ನು ಕಲಿಸುವುದಕ್ಕಿಂತಲೂ ವ್ಯಕ್ತಿತ್ವ ವಿಕಸನಗೊಳ್ಳುವಂತಹ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯ ಇದೆ ಎಂದು ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗಡೆ ಸಲಹೆ ನೀಡಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಆಯೋಜಿಸಿದ್ದ ವೃತ್ತಿಪರ ಶಿಕ್ಷಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಯಾರ ತಲೆಯಲ್ಲೂ ಜೀರ್ಣವಾಗದ ಪಠ್ಯ ಪುಸ್ತಕದಲ್ಲಿನ ವಿಷಯಗಳನ್ನು ಮಕ್ಕಳಿಗೆ ಕಲಿಸಿ ಹೊರ ಜಗತ್ತಿಗೆ ಬಿಟ್ಟರೆ ಅವರು ಬದುಕನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತದೆ. ದೇಶದಲ್ಲಿ ಶೇ.80ರಷ್ಟು ಜನ ಓದಿದ್ದೇ ಬೇರೆ, ಮಾಡುವ ಕೆಲಸವೇ ಬೇರೆ. ಕೇವಲ ಪಠ್ಯ ಕ್ರಮದಿಂದ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು ಮಕ್ಕಳಲ್ಲಿ ಬೆಳೆಯುವುದಿಲ್ಲ. ಬದುಕಿಗೆ ಅಗತ್ಯವಾದ ಮಾರ್ಗದರ್ಶನವೂ ಸಿಗುವುದಿಲ್ಲ ಎಂದರು.

ಹಿಂದೆ ಗುರುಕುಲ ಪದ್ಧತಿಯಲ್ಲಿ ಮಕ್ಕಳಿಗೆ ಕುತೂಹಲ ಕೆರಳಿಸುವಂತಹ ಶಿಕ್ಷಣ ಪದ್ಧತಿ ಇತ್ತು. ಅದನ್ನು ಆಧರಿಸಿ ಮಕ್ಛ್ಕಳು ತಾವೇ ಕಲಿಯುತ್ತಿದ್ದರು. ಈಗಲೂ ಕೆಲವು ಖಾಸಗಿ ಶಾಲೆಗಳು ಗುರುಕುಲ ಪದ್ಧತಿ ಹೆಸರಿನಲ್ಲಿ ಅಗತ್ಯವಾದುದ್ದನ್ನು ಕಲಿಸುತ್ತಿವೆ. ಅದರ ಬದಲಾಗಿ ಮಕ್ಕಳನ್ನು ಮುಕ್ತ ವಾತಾವರಣದಲ್ಲಿ ಕಲಿಯಲು ಬಿಡಬೇಕು. ಅರ್ಧಗಂಟೆ ಕಂಪ್ಯೂಟರ್ ಮುಂದೆ ಅವರ ಪಾಡಿಗೆ ಅವರು ಆಟವಾಡಲು ಬಿಟ್ಟರೆ ಅವರಲ್ಲಿ ಸ್ವಂತಿಕೆ ಬೆಳೆಯುತ್ತದೆ. ಅದನ್ನು ಮೌಲ್ಯಮಾಪನ ಮಾಡಿ ಅವರ ಮುಂದಿನ ಬದುಕಿಗೆ ಅಗತ್ಯವಾದ ಶಿಕ್ಷಣವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ಸ್ವಂತಿಕೆ ಬೆಳೆಸದೇ ಇದ್ದರೆ ನಾವು ಎಂಥಹದ್ದೇ ಶಿಕ್ಷಣ ಕೊಟ್ಟರೂ ಪ್ರಯೋಜನವಾಗುವುದಿಲ್ಲ. ಸ್ವಂತಿಕೆ ಇಲ್ಲದ ವ್ಯಕ್ತಿ ದೇಶವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ವೃತ್ತಿಪರ ಆಧಾರಿತ ಸಂವೇದನಾ ಶೀಲತೆ, ಗಾಢ ಅನುಭವ ಇರುವ ಶಿಕ್ಷಣ ವ್ಯವಸ್ಥೆಯನ್ನು ನಾವು ಕಟ್ಟಬೇಕಿದೆ ಎಂದು ಅವರು ಸಲಹೆ ನೀಡಿದರು.
ಕರ್ನಾಟಕ ಸರ್ಕಾರ ತಂತ್ರಜ್ಞಾನದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಶಿಕ್ಷಣದಲ್ಲಿ ಅದೇ ರೀತಿಯ ಬದಲಾವಣೆ ತರಲು ಪ್ರಯತ್ನಿಸಬೇಕು ಎಂದರು.
ಇತ್ತೀಚಿನ ವರದಿಯಲ್ಲಿ ದೇಶದ ಶೇ.25ರಷ್ಟು ಮಹಿಳೆಯರು ಮಾತ್ರ ಉದ್ಯೋಗ ಮಾಡುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಇದು ತಪ್ಪು ಮಾಹಿತಿ. ಗೃಹಿಣಿಯಾಗಿರುವ ಮಹಿಳೆಯೂ ಉದ್ಯೋಗಸ್ಥೆ ಯಾಗಿದ್ದಾರೆ. ಅವರ ಮನೆ ನಿರ್ವಹಣೆ ಎಂಬಿಎ ಪದವೀಧರ ಮಾಡುವ ಮ್ಯಾನೇಜ್‍ಮೆಂಟ್‍ಗಿಂತಲೂ ಉತ್ಕøಷ್ಟವಾಗಿದೆ. ಮಕ್ಕಳನ್ನು ಸರಿದಾರಿಗೆ ತರುವುದು, ಸಮಸ್ಯೆಗಳು ಎದುರಾದಾಗ ಅದಕ್ಕೆ ಪರಿಹಾರ ಸೂಚಿಸುವುದು ಎಲ್ಲವೂ ಮಹಿಳೆಯರ ಜವಾಬ್ದಾರಿ. ಅದನ್ನು ಅವರು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಕ್ಕಳಿಗಾಗಿ ಪ್ರಾಥಮಿಕ ಹಂತದಲ್ಲೇ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು. ಶಾಲೆಗಳಲ್ಲಿ ಸ್ಕಿಲ್ ಕ್ಲಬ್, ಐಡಿಯಾ ಕ್ಲಬ್‍ಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ವ್ಯಕ್ತಿ ತನ್ನ ಬದುಕನ್ನು ತಾನು ಕಟ್ಟಿಕೊಳ್ಳುವ ಶಿಕ್ಷಣವನ್ನು ಸರ್ಕಾರ ನೀಡಬೇಕಿದೆ. ತನ್ನ ಬದುಕನ್ನು ಕಟ್ಟಿಕೊಳ್ಳದ ವ್ಯಕ್ತಿ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವರ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು.
ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಾಮಾಜಿಕ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. 1901ರವರೆಗೆ ಶೇ.6ರಷ್ಟು ಜನ ಮಾತ್ರ ವಿದ್ಯಾವಂತರಾಗಿದ್ದರು. 1950ರ ವೇಳೆಗೆ ಶೇ.16ರಷ್ಟು ಸಾಕ್ಷರತೆ ಇತ್ತು. ಅಲ್ಲಿಂದ 1911ರ ವೇಳೆಗೆ ಶೇ.74ರಷ್ಟು ಸಾಕ್ಷರತೆಯನ್ನು ಸಾಧಿಸಿದ್ದೇವೆ. ನನ್ನ ಕುಟುಂಬದಲ್ಲಿ ನಾನು ಮೊದಲ ವಿದ್ಯಾವಂತ. ಅಪ್ಪ, ಅಪ್ಪ, ಅಜ್ಜಿ, ತಾತ ಎಲ್ಲರೂ ಗುಲಾಮಗಿರಿಯಲ್ಲಿ ಬದುಕಿದವರು. ನನ್ನ ಶಾಲೆಯ ಮೇಸ್ಟ್ರು ತನ್ನ ತಂದೆಯ ಬಳಿ ನಿನ್ನ ಮಗನಿಗೆ ನಾಲಿಗೆ ಹೊರಳುವುದಿಲ್ಲ. ಅವನನ್ನು ದನ ಕಾಯಲು ಕಳುಹಿಸು ಎಂದು ಹೇಳುತ್ತಿದ್ದರು. ಅದನ್ನು ಸವಾಲಾಗಿ ತೆಗೆದುಕೊಂಡು ನಾನು ಅರ್ಥಶಾಸ್ತ್ರದ ಸ್ನಾತಕೋತ್ತರದಲ್ಲಿ ಫಸ್ಟ್ ರ್ಯಾಂಕ್ ಪಡೆದೆ. ಮೀಸಲಾತಿ ಸೌಲಭ್ಯದಲ್ಲಿ ಸರ್ಕಾರಿ ನೌಕರಿ ಸೇರಿದೆ. ನನ್ನ ಮಕ್ಕಳು ಮೀಸಾತಿ ಸೌಲಭ್ಯ ಪಡೆಯುತ್ತಿಲ್ಲ. ನನ್ನ ಮೊಮ್ಮಕ್ಕಳೂ ಪಡೆಯುವುದಿಲ್ಲ. ನನ್ನ ತಲೆಮಾರಿಗೆ ಶಿಕ್ಷಣದ ಬಾಗಿಲು ತೆರೆದಾಗ ಅತಿವೇಗವಾಗಿ ನಾವು ಬೆಳೆದು ಬಂದಿದ್ದೇವೆ. ಈ ಸಾಮಾಜಿಕ ಹಿನ್ನೆಲೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಶಾಲೆಗಳಿಗೆ ಮಕ್ಕಳು ಹೋಗುವಾಗ ತುಂಬ ಬೇಸರದಿಂದಿರುತ್ತಾರೆ. ಶಾಲೆ ಬಿಟ್ಟಾಗ ಹೊಸ ಜಗತ್ತಿಗೆ ಬರುವವರಂತೆ ಉತ್ಸಾಹದಿಂದ ಬರುತ್ತಾರೆ. ಒಂದು ವರ್ಗದ ಮಕ್ಕಳಿಗೆ ಮಾತ್ರ ಶಾಲೆ ಮನೆಯ ಮುಂದುವರಿಕೆಯ ಭಾಗವಾಗಿದೆ. ವಸ್ತು, ವಿಷಯಗಳಿಗೂ ಶಾಲೆಗೂ ಸಂಬಂಧವೇ ಇಲ್ಲ. ಶಾಲೆ ಎಂಬುದು ಅವರಿಗೆ ಬಂಧನವಾಗಿದೆ. ಈ ವಾತಾವರಣವನ್ನು ಬದಲಾಯಿಸಬೇಕಾಗಿದೆ ಎಂದು ತಿಳಿಸಿದರು.
ಶಿಕ್ಷಣ ವ್ಯಕ್ತಿಯನ್ನು ಉತ್ಪಾದಕನನ್ನಾಗಿ ಮಾಡಬೇಕು. ಆತ ತನ್ನ ಜೀವನವನ್ನು ಸುಧಾರಿಸಿಕೊಂಡು ಉತ್ಪಾದನೆಯಲ್ಲಿ ತೊಡಗಿದಾಗ ಮಾತ್ರ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ. ಸಂಘಟಿತ ವಲಯದಲ್ಲಿ ಶೇ.10ರಷ್ಟು ಮಾತ್ರ ಉದ್ಯೋಗಾವಕಾಶಗಳಿವೆ. ಉಳಿದಂತೆ ಶೇ.90ರಷ್ಟು ಅಸಂಘಟಿತ ವಲಯದಲ್ಲೇ ಉದ್ಯೋಗಾವಕಾಶಗಳಿವೆ. ಅಲ್ಲಿ ಸ್ಪರ್ಧೆ ಮಾಡಲು ನಮ್ಮ ಮಕ್ಕಳನ್ನು ಸಜ್ಜುಗೊಳಿಸಬೇಕೆಂದು ಹೇಳಿದರು.
ಹಿರಿಯ ಅಧಿಕಾರಿಗಳಾದ ಶಾಲಿನಿ ರಜನೀಶ್, ಜಾಫರ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು. ಇದೇ ಸಂದರ್ಭದಲ್ಲಿ ವೃತ್ತಿ ಸಮಾಲೋಚನಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ