ಬಿಬಿಎಂಪಿಯಿಂದ ಅತ್ಯುತ್ತಮ ಬಜೆಟ್ ಮಂಡನೆ: ಎಂ.ಶಿವರಾಜ್ ಪ್ರಶಂಸೆ

ಬೆಂಗಳೂರು, ಮಾ.2-ಅಡಮಾನವಿಟ್ಟ ಬಿಬಿಎಂಪಿ ಪಾರಂಪರಿಕ ಕಟ್ಟಡಗಳನ್ನು ಹಿಂದಕ್ಕೆ ಪಡೆದು ಆರ್ಥಿಕ ಶಿಸ್ತನ್ನು ಕಾಪಾಡಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಮುಂದುವರೆಸಿಕೊಂಡು ಬೃಹತ್ ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಅತ್ಯುತ್ತಮ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಪ್ರಶಂಸಿಸಿದರು.

ಬಿಬಿಎಂಪಿಯ ಸಭೆಯಲ್ಲಿಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದುವರೆಗೂ ಯಾವುದೇ ರಾಜ್ಯಸರ್ಕಾರ ನೀಡದಷ್ಟು ಅನುದಾನವನ್ನು ಬೆಂಗಳೂರು ಮಹಾನಗರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ನೀಡಿದೆ. ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವರ್ಷ 4,250 ಕೋಟಿ ರೂ. ಸೇರಿದಂತೆ ಒಟ್ಟು 12,551 ಕೋಟಿ ರೂ.ಗಳ ದಾಖಲೆಯ ಅನುದಾನವನ್ನು ಸರ್ಕಾರ ನೀಡಿದೆ ಎಂದು ಅವರು ಹೇಳಿದರು.

ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಅತ್ಯುತ್ತಮವಾಗಿ ನಡೆಯುತ್ತಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಹದೇವ್ ಅವರು ಪಾರದರ್ಶಕ, ಜನಪರ ಹಾಗೂ ಜನಸ್ನೇಹಿಯಾದ ಬಜೆಟ್ ಮಂಡಿಸಿದ್ದಾರೆ ಎಂದರು.

ಸಾಲವನ್ನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಸೆಳೆವಾಗ ಕಿಬ್ಬದಿ ಕೀಲು ಮುರಿದಂತೆ ಸರ್ವಜ್ಞ ಎಂಬ ತ್ರಿಪದಿಯನ್ನು ಉಲ್ಲೇಖಿಸಿದ ಶಿವರಾಜ್ ಅವರು ಹಿಂದೆ ಬಿಜೆಪಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಸಾಲ ಮಾಡಿ ಆರ್ಥಿಕ ಶಿಸ್ತನ್ನು ಕಾಪಾಡದೆ ಅದ್ವಾನವಾಗಿತ್ತು. ಅಲ್ಲದೆ 11 ಪಾರಂಪರಿಕ ಕಟ್ಟಡಗಳನ್ನು ಅಡಮಾನವಿಟ್ಟು 1676 ಕೋಟಿ ರೂ.ಗಳ ಸಾಲ ಪಡೆದು ಆರ್ಥಿಕ ಅಶಿಸ್ತಿನಿಂದ ಪಾಲಿಕೆಗೆ ಕೆಟ್ಟ ಹೆಸರು ಬಂದಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಬಂದ ಮೇಲೆ ಅಡಮಾನವಿಟ್ಟ ನಾಲ್ಕು ಕಟ್ಟಡಗಳನ್ನು ಬಿಡಿಸಿಕೊಂಡು ಬಿಬಿಎಂಪಿ ಗೌರವ ಕಾಪಾಡಲಾಯಿತು. ಇನ್ನೂ ಎರಡು ಕಟ್ಟಡಗಳನ್ನು ಬಿಡಿಸಿಕೊಳ್ಳಲಾಗುವುದು ಎಂದು ಹಿಂದಿನ ಬಿಜೆಪಿ ಆಡಳಿತದ ವೈಖರಿಯನ್ನು ಟೀಕಿಸಿದರು.

ಗುತ್ತಿಗೆದಾರರಿಗೆ 46 ತಿಂಗಳ ಬಾಕಿ ಬಿಲ್ ಪಾವತಿಸಬೇಕಿತ್ತು. ಈಗ ನಾವು ಆರ್ಥಿಕ ಶಿಸ್ತು ನಿರ್ವಹಣೆ ಮಾಡಿ 30 ತಿಂಗಳ ಬಿಲ್ ಪಾವತಿ ಮಾಡಿದ್ದೇವೆ. 16 ತಿಂಗಳ ಬಿಲ್ ಪಾವತಿಸಬೇಕಿದೆ, ಅದನ್ನೂ ಸದ್ಯದಲ್ಲೇ ಪಾವತಿಸುತ್ತೇವೆ. ಬಿಜೆಪಿ ಆಡಳಿತಾವಧಿಯಲ್ಲಿ ಎಲ್‍ಒಸಿಗಳನ್ನು ಮಾಡಿಕೊಂಡು ತಮಗೆ ಬೇಕಾದವರಿಗೆ ಬಿಲ್ ಪಾವತಿ ಮಾಡಲಾಗುತ್ತಿತ್ತು ಎಂದು ಆರೋಪಿಸಿದರು.
ಸುಮಾರು 500 ಬೇನಾಮಿ ಖಾತೆಗಳನ್ನು ಪತ್ತೆ ಹಚ್ಚಿ ಅಗತ್ಯ ಅಕೌಂಟ್‍ಗಳು ಮಾತ್ರ ಇರುವಂತೆ ನೋಡಿಕೊಳ್ಳಲಾಯಿತು. ನಾವು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಟೋಟಲ್ ಸ್ಟೇಷನ್ ಸರ್ವೇ ಮಾಡಿರುವುದರಿಂದ ಐನೂರು ಕೋಟಿ ರೂ. ತೆರಿಗೆ ಹೆಚ್ಚಳವಾಗಲಿದೆ.
ಗುಣಶೇಖರ್ ಮತ್ತು ನಾನು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ತೆರಿಗೆ ಮೇಳ ನಡೆಸಿದಾಗ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತೆರಿಗೆ ಕಟ್ಟಿದರು. ಇದರಿಂದ ತೆರಿಗೆ ಹೆಚ್ಚಳವಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 7330 ಕೋಟಿ ರೂ. ಕ್ರಿಯಾಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಿದರು. ಇದರಿಂದ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಾಧ್ಯವಾಯಿತು ಎಂದು ಶಿವರಾಜ್ ಹೇಳಿದರು.

ಬಜೆಟ್‍ನಲ್ಲಿ ಆರ್ಥಿಕ ಶಿಸ್ತು, ಆಸ್ತಿ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಬಜೆಟ್‍ನಲ್ಲಿ ಪ್ರಸ್ತಾಪಿಸಿದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರೈಸುತ್ತೇವೆ ಎಂದು ಅವರು ಹೇಳಿದರು.

ಮಳೆ ನೀರು ಕೊಯ್ಲಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಪೌರಕಾರ್ಮಿಕರಿಗೆ ಬಿಸಿಯೂಟ ವ್ಯವಸ್ಥೆ, ಅವರಿಗೆ ಸಂಬಳ ನೇರವಾಗಿ ಅವರ ಖಾತೆಗೆ ಸಂದಾಯವಾಗುವಂತೆ ಮಾಡಿದ್ದು ನಾವು ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಬಡವರ ಹಸಿವು ನೀಗಿಸುವ ಮಹತ್ವದ ಕೆಲಸವನ್ನು ಮಾಡಿದ್ದೇವೆ. ಬಿಬಿಸಿ ನ್ಯೂಸ್ ಇಂದಿರಾ ಕ್ಯಾಂಟೀನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಇಂದಿರಾ ಕ್ಯಾಂಟೀನ್‍ಗಳಲ್ಲಿ ಜನೌಷಧಿ ಕೊಡಲಾಗುವುದು. ಜನರಿಕ್ ಮೆಡಿಸಿನ್ ಕೊಡಲಾಗುವುದು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರೊಬ್ಬರು ಮೋದಿ ಮನ್ ಕೀ ಬಾತ್ ಪ್ರಸ್ತಾಪಿಸಿದರು. ಇದಕ್ಕೆ ಶಿವರಾಜ್, ನಮ್ಮದು ಮಾತು ಕಮ್ಮಿ, ನಮ್ಮದು ಕಾಮ್ ಕೀ ಬಾತ್ ಎಂದು ಟಾಂಗ್ ಕೊಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ನಾಳೆ ನಮ್ಮ ಇಂದಿರಾ ಕ್ಯಾಂಟೀನ್‍ನಲ್ಲಿ ವಾಂಗೀ ಬಾತ್ ಎಂದು ಬಿಜೆಪಿಯನ್ನು ಕಿಚಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ