ಚಾಲ್ತಿ ಖಾತೆ ಕೊರತೆ ಸರಿ ಪಡಿಸಿಕೊಂಡರೆ ರೂಪಾಯಿ ಮೌಲ್ಯ ಬಲಗೊಳ್ಳುತ್ತದೆ: ರಘುರಾಮ ರಾಜನ್

ನವದೆಹಲಿ:ಆ-25: ಡಾಲರ್​ ಎದುರು ನಿರಂತರ ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಭಯಪಡುವ ಅಗತ್ಯವಿಲ್ಲ; ಪ್ರಸ್ತುತ ಇರುವ ಚಾಲ್ತಿ ಖಾತೆ ಕೊರತೆಯನ್ನ ಸರಿ ಪಡಿಸಿಕೊಂಡರೆ ರೂಪಾಯಿ ಮೌಲ್ಯ ಬಲಗೊಳ್ಳುತ್ತದೆ ಎಂದು ಆರ್​ಬಿಐ ಮಾಜಿ ಗವರ್ನರ್​ ರಘುರಾಮ ರಾಜನ್​ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ ತನ್ನ ಚಾಲ್ತಿ ಖಾತೆ ಕೊರತೆಯನ್ನ ನೀಗಿಸಿಕೊಂಡರೆ ಎಲ್ಲವೂ ಸರಿಹೋಗುತ್ತದೆ. ಅಲ್ಲದೇ ಹಣಕಾಸು ಕೊರತೆಯನ್ನು ಸಹ ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ವಿಶೇಷ ಎಂದರೆ ಇದರಲ್ಲಿ ಕಚ್ಚಾತೈಲ ಬೆಲೆ ಏರಿಕೆ ಬಹಳಷ್ಟು ಕೊಡುಗೆ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್​ ತನ್ನ ಮೌಲ್ಯ ವೃದ್ಧಿಸಿಕೊಂಡಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್​ ಹಾಗೂ ಭಾರತ ಚುನಾವಣೆಗೆ ತೆರಳುತ್ತಿರುವುದರಿಂದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬೇಕಾಗಿರುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಳೆದ ವಾರ ಡಾಲರ್​ ವಿರುದ್ಧ ರೂಪಾಯಿ ಮೌಲ್ಯ 70.32 ಪೈಸೆಗೆ ಕುಸಿದಿತ್ತು. ಅದೀಗ ಚೇತರಿಸಿಕೊಂಡಿದ್ದು, 69.91ಕ್ಕೆ ತಲುಪಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ