ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ರಚಿಸಿಕೊಂಡಿರುವ ಸಮನ್ವಯ ಸಮಿತಿ ವಿಸ್ತರಣೆಗೆ ಎದುರು ನೋಡುತ್ತಿದ್ದು, ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಇದು ಸುತಾರಾಂ ಇಷ್ಟವಿಲ್ಲ, ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸೇರ್ಪಡೆಯಾಗುವುದು ಸಾಕಷ್ಟು ಅಸಮಾಧಾನ ಮೂಡಿಸಿದೆ ಎನ್ನಲಾಗುತ್ತಿದೆ.
ಒಂದುವೇಳೆ ವಿಶ್ವನಾಥ್ ಸೇರ್ಪಡೆಯಾದರೆ ಮುಂದೆ ಬೇರೆಯದೇ ರೀತಿಯ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಜರುಗಬಹುದು ಎನ್ನುವ ಮಾತು ಸಿದ್ದರಾಮಯ್ಯ ಆಪ್ತವಲಯದಿಂದ ಕೇಳಿ ಬರುತ್ತಿದೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಒಳಮುನಿಸು ಈ ನೇಮಕದಿಂದ ಹೊರಬೀಳುವ ಸಾಧ್ಯತೆ ಕೂಡ ಅಲ್ಲಗಳೆಯುವಂತಿಲ್ಲ ಎನ್ನುತ್ತಿವೆ ರಾಜಕೀಯ ಮೂಲಗಳು.
ಸಾಮಾನ್ಯವಾಗಿ ಸಮನ್ವಯ ಸಮಿತಿ, ಸಮ್ಮಿಶ್ರ ಸರ್ಕಾರ ಸೇರಿದಂತೆ ಯಾವುದೇ ಚಟುವಟಿಕೆಯಲ್ಲಿ ಸಿದ್ದರಾಮಯ್ಯ ಸಕ್ರಿಯವಾಗಿ ತೊಡಗಿಕೊಂಡಿಲ್ಲ. ಒಂದೊ ಇವರನ್ನು ಸಕ್ರಿಯಗೊಳಿಸುವ ರೀತಿ ಸಮನ್ವಯ ಸಮಿತಿ ವಿಸ್ತರಿಸುವ ಇಲ್ಲವೇ, ಸಮನ್ವಯ ಸಮಿತಿಯನ್ನೇ ಪುನರ್ರಚಿಸುವ ಸಂಬಂಧ ರಾಜ್ಯ ಸಮ್ಮಿಶ್ರ ಸರ್ಕಾರ ಚಿಂತನೆ ನಡೆಸಿದೆ. ಅದಾಗಲೇ ಸರ್ಕಾರದ ರಚನೆಗೆ ಮೂಲ ಕಾರಣರಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿ ಈ ಮಾಹಿತಿ ತಲುಪಿಸಲಾಗಿದೆ.
ಒಂದೆಡೆ ಪಕ್ಷದ ಮಟ್ಟದಲ್ಲಿ ಕೈ ನಾಯಕರು ಸರ್ಕಾರದ ವಿಚಾರವಾಗಿ ಅಷ್ಟೇನು ಉತ್ತಮ ಭಾವನೆ ಹೊಂದಿಲ್ಲ. ಸಿದ್ದರಾಮಯ್ಯರ ಮಾತಿಗೆ ಬದ್ಧವಾಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ಸರ್ಕಾರದ ಭಾಗವಾಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸರ್ಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ನ ಈ ಎರಡು ಬಣದ ಕಿತ್ತಾಟದಲ್ಲಿ ಯಾರಿಗೆ ಗೆಲುವು ಸಿಗಲಿದೆ ಎನ್ನುವುದು ಸದ್ಯವೇ ಸಮನ್ವಯ ಸಮಿತಿಯ ಬದಲಾಗುವ ಸ್ಥಿತಿ ಆಧರಿಸಿ ಇರಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಹಳೆ ಮೈಸೂರು ಭಾಗದ ಪ್ರಭಾವಿ ನಾಯಕ ಹೆಚ್.ವಿಶ್ವನಾಥ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಯಾವತ್ತೂ ಅಷ್ಟಕ್ಕಷ್ಟೆ. ಸಾಕಷ್ಟು ಸಾರಿ ಪರಸ್ಪರ ವಿರುದ್ಧ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇದೀಗ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ಕಾರಣಕ್ಕೆ ನನ್ನನ್ನು ಸಮನ್ವಯ ಸಮಿತಿಗೆ ಸೇರಿಸಲಾಗಿತ್ತು. ಇದೀಗ ದಿನೇಶ್ ಗುಂಡೂರಾವ್ ಪಕ್ಷದ ರಾಜ್ಯಾಧ್ಯಕ್ಷರು ಸಮನ್ವಯ ಸಮಿತಿಗೆ ಅವರ ಸೇರ್ಪಡೆ ಅಗತ್ಯ. ಇನ್ನೊಂದೆಡೆ ಕುಮಾರಸ್ವಾಮಿ ಅವರು ಸಿಎಂ ಜತೆಗೆ ರಾಜ್ಯಾಧ್ಯಕ್ಷರಾಗಿದ್ದರು. ಈಗ ಹೆಚ್.ವಿಶ್ವನಾಥ್ ರಾಜ್ಯಾಧ್ಯಕ್ಷರಾಗಿದ್ದಾರೆ. ಸಮನ್ವಯ ಸಾಧಿಸಲು ಈಗ ಎರಡೂ ಪಕ್ಷದ ರಾಜ್ಯಾಧ್ಯಕ್ಷರ ಸೇರ್ಪಡೆಗೆ ನಮ್ಮ ಅಭ್ಯಂತರವಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಾರೆ ಒಂದೆಡೆ ಸಮನ್ವಯ ಸಮಿತಿ ಪುನರ್ ರಚನೆ ಆಗಲಿದೆ. ಅದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳುತ್ತಿದ್ದಾರೆ. ಇನ್ನೊಂದೆಡೆ ವಿಸ್ತರಣೆ ಇಲ್ಲ ಎಂದು ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇವೆಲ್ಲವುಗಳ ಕುರಿತು ಚರ್ಚೆ ನಡೆಸುವ ಸಮನ್ವಯ ಸಮಿತಿ ಸಭೆ ಇದೇ ಆ.30 ಅಥವಾ 31ರಂದು ನಡೆಯುವುದಾ ಅನ್ನುವುದು ಕೂಡ ನಿಗದಿಯಾಗಿಲ್ಲ.