ರಾಜ್ಯ ಸರ್ಕಾರದಿಂದಲೇ ಗ್ರಾಮ ಪಂಚಾಯ್ತಿ ನೌಕರರ ವೇತನ ಪಾವತಿಗೆ ತೀರ್ಮಾನ

ಬೆಂಗಳೂರು, ಮಾ.2- ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ನೌಕರರ ವೇತನವನ್ನು ಸರ್ಕಾರವೇ ಪಾವತಿಸಲು ತೀರ್ಮಾನಿಸಿದ್ದು, ಮಾ.1ರಿಂದಲೇ ನೌಕರರಿಗೆ ವೇತನ ಪಾವತಿ ಆರಂಭಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದರಿಂದ ವಾರ್ಷಿಕ 736.68 ಕೋಟಿ ಸರ್ಕಾರಕ್ಕೆ ಹೊರೆಯಾಗಲಿದೆ. ರಾಜ್ಯದ 6024 ಗ್ರಾಪಂಗಳ 50,114 ನೌಕರರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಪ್ರತಿ ತಿಂಗಳು ನೌಕರರ ವೇತನ ಪಾವತಿಯಾಗದೆ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿರು ವುದನ್ನು ಮನಗಂಡ ಸರ್ಕಾರ, ಸರ್ಕಾರದವತಿಯಿಂದಲೇ ವೇತನ ಪಾವತಿಸಿ ಸಂಕಷ್ಟ ದಿಂದ ಪಾರುಮಾಡುತ್ತಿದೆ. ಗ್ರಾಪಂ ಮಟ್ಟದಲ್ಲಿ ನೌಕರರು ಜನರಿಗೆ ಮೂಲಸೌಕರ್ಯಗಳಾದ ಕುಡಿಯುವ ನೀರು, ನೈರ್ಮಲ್ಯ, ಪಂಚಾಯ್ತಿ ಸಂಪನ್ಮೂಲ ಸಂಗ್ರಹಣೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.

ಗ್ರಾಮ ಪಂಚಾ ಯಿತಿ ಗಳ ಪಿಡಿಒ ಹೊರತು ಪಡಿಸಿ ಗುಮಾಸ್ತ, ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ವಾಟರ್‍ಮೆನ್, ಮೆಕ್ಯಾನಿಕ್, ಸ್ವಚ್ಛತಾಗಾರರ ಹುದ್ದೆ ನಿರ್ವಹಿಸುವವರಿಗೆ ಈ ಸೌಲಭ್ಯ ಅನ್ವಯವಾಗಲಿದೆ.

ಇಂತಹ ನೌಕರರಿಗೆ ನಿಗದಿತ ಅವಧಿಯೊಳಗೆ ಕಾರ್ಮಿಕ ಇಲಾಖೆ ನಿಗದಿ ಪಡಿಸಿರುವ ಕನಿಷ್ಠ ವೇತನ ದೊರಕದೆ ಜೀವನ ನಿರ್ವಹಣೆ ಕಷ್ಟವಾಗಿರುವುದನ್ನು ಅರಿತು ಗ್ರಾಪಂ ನೌಕರರಿಗೆ ಸರ್ಕಾರದಿಂದಲೇ ವೇತನ ನೀಡಲು ತೀರ್ಮಾನಿಸಿದ್ದಲ್ಲದೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಪಂಚತಂತ್ರ ತಂತ್ರಾಂಶ ದಲ್ಲಿ ಮಾನವ ಸಂಪ ನ್ಮೂಲ, ಗಣಕೀಕೃತ, ನಿರ್ವಹಣಾ ವ್ಯವಸ್ಥೆ ಯನ್ನು ಜಾರಿಗೆ ತರುವ ಮೂಲಕ ವೇತನ ಪಾವತಿ ವಿಳಂಬವಾಗದಂತೆ ಸಮಯಕ್ಕೆ ಸರಿಯಾಗಿ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.

2014ರ ಸೆಪ್ಟೆಂಬರ್ 10ರಂದು ಗ್ರಾಮ ಪಂಚಾಯ್ತಿ ನೌಕರರನ್ನು ಸಕ್ರಮಗೊಳಿಸಲಾಗಿತ್ತು. ಕನಿಷ್ಠ ವೇತನ, ಸೇವಾ ಭದ್ರತೆ, ನಿವೃತ್ತಿ ಉಪದಾನಗಳಂತಹ ಪ್ರಮುಖ ಶಾಸನಬದ್ಧ ನಿಯಮಗಳಿಂದ ವಂಚಿತರಾಗಿರುವುದನ್ನು ತಿಳಿದು ಅವರ ಸೇವೆಯನ್ನು ಸಕ್ರಮಗೊಳಿಸಲಾಗಿತ್ತು. ಆದರೂ ಕಾಲಕಾಲಕ್ಕೆ ಪಂಚಾಯ್ತಿಯಿಂದ ವೇತನ ಪಾವತಿಯಾಗುತ್ತಿರಲಿಲ್ಲ ಎಂದು ಅವರು ವಿವರಿಸಿದರು.

ಸರ್ಕಾರದ ವತಿಯಿಂದ ವೇತನ ಪಾವತಿಸಲು ಮಂಜೂರಾತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಗ್ರಾಪಂ ನೌಕರರು ಇನ್ನು ಮುಂದೆ ಹೆಚ್ಚು ಬದ್ಧತೆ, ಶಿಸ್ತಿನಿಂದ ಕೆಲಸ ಮಾಡಬೇಕೆಂದು ಇದೇ ವೇಳೆ ಕಿವಿಮಾತು ಹೇಳಿದರು.
ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರದಲ್ಲಿ ರಾಜ್ಯ ಸರ್ಕಾರ ಮೊದಲ ಸ್ಥಾನದಲ್ಲಿದೆ. ಶೌಚಾಲಯದ ನಿರ್ಮಾಣದಲ್ಲೂ ಶೇ. 90ರಷ್ಟು ಪ್ರಗತಿ ಸಾಧಿಸಿ ಎಂದು ಸಚಿವರು ಮಾಹಿತಿ ನೀಡಿದರು.

ನೇಮಕಾತಿ ಆದೇಶ:
ಇದೇ 5 ರಂದು ನೂತನವಾಗಿ ನೇಮಕಗೊಂಡಿರುವ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆಯ ಬಳಿ ಪ್ರತಿಜ್ಞಾವಿಧಿ ಬೋಧಿಸಿ ನೇಮಕಾತಿ ಆದೇಶ ನೀಡಲಾಗುವುದು.
ಒಟ್ಟು 815 ಪಿಡಿಒ ಮತ್ತು 850 ಗ್ರಾ.ಪಂ. ಕಾರ್ಯದರ್ಶಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಂಡಿದ್ದು ನೇಮಕಾತಿ ಆದೇಶ ಪಡೆಯಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ