ಬೆಂಗಳೂರು, ಆ.24- ಮೇಯರ್ ಸಂಪತ್‍ರಾಜ್ ಅವರ ಅವಧಿ ಪೂರ್ಣಗೊಳ್ಳಲು ಒಂದು ತಿಂಗಳು ಬಾಕಿ ಇರುವ ಬೆನ್ನಲ್ಲೇ ಮುಂದಿನ ಮೇಯರ್ ಆಯ್ಕೆಯ ಮೀಸಲಾತಿಯನ್ನು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂದಿನ ಮೇಯರ್ ಆಯ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆದರೆ, ಸರ್ಕಾರ ಆ ಮೀಸಲಾತಿಯನ್ನು ಬಿಸಿಎಂಗೆ ಬದಲಾವಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಸಾಮಾನ್ಯ ಮಹಿಳಾ ಮೀಸಲಾತಿಯನ್ನು ಬಿಸಿಎಂಗೆ ಬದಲಾಯಿಸಿ ಆ ವರ್ಗದ ಪ್ರಮುಖ ನಾಯಕರೊಬ್ಬರಿಗೆ ಮೇಯರ್ ಪಟ್ಟ ಕಟ್ಟುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಉದ್ದೇಶವಾಗಿದೆ.
ಮುಂಬರುವ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಪೈಪೆÇೀಟಿ ಆರಂಭವಾಗಿದ್ದು, ಸೌಮ್ಯ ಶಿವಕುಮಾರ್, ಗಂಗಾಂಬಿಕೆ ಹಾಗೂ ಲಾವಣ್ಯ ಗಣೇಶ್‍ರೆಡ್ಡಿ ಅವರು ಮೇಯರ್ ಸ್ಥಾನ ಅಲಂಕರಿಸಲು ಲಾಬಿ ಆರಂಭಿಸಿದ್ದಾರೆ.
ಜಿ.ಪದ್ಮಾವತಿ ಮೇಯರ್ ಆಗಿ ಆಯ್ಕೆಯಾದ ಸಂದರ್ಭದಲ್ಲೇ ನನ್ನನ್ನು ಪರಿಗಣಿಸುವಂತೆ ಸೌಮ್ಯ ಶಿವಕುಮಾರ್ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದರು. ಆ ಸಂದರ್ಭದಲ್ಲಿ ವರಿಷ್ಠರು ಮುಂದಿನ ಬಾರಿ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.
ಹೀಗಾಗಿ ಈ ಬಾರಿ ವರಿಷ್ಠರು ನನಗೆ ಮೇಯರ್ ಸ್ಥಾನ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸದಲ್ಲಿರುವ ಸೌಮ್ಯ ಶಿವಕುಮಾರ್ ಅವರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ಇನ್ನು 40 ವರ್ಷಗಳಿಂದ ಲಿಂಗಾಯತರಿಗೆ ಮೇಯರ್ ಪಟ್ಟ ಸಿಕ್ಕಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳದೆ ಜಯನಗರ ವಾರ್ಡ್‍ನಿಂದ ಸತತವಾಗಿ ಎರಡು ಬಾರಿ ಗೆದ್ದು ಬಂದಿರುವ ಲಿಂಗಾಯತ ಸಮುದಾಯದ ಗಂಗಾಂಬಿಕೆ ಅವರಿಗೆ ಮಹಾಪೌರರ ಪಟ್ಟ ಕಟ್ಟುವಂತೆ ಒತ್ತಡ ಹೆಚ್ಚಾಗಿದೆ.
ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಬಿಬಿಎಂಪಿ ಮೇಯರ್ ಆಯ್ಕೆ ಸಂದರ್ಭದಲ್ಲಿ ಗಂಗಾಂಬಿಕೆ ಅವರನ್ನು ಪರಿಗಣಿಸಬೇಕು ಎಂದು ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ.
ಇನ್ನು ಉತ್ತರ ಭಾಗಕ್ಕೆ ಮೇಯರ್ ಪಟ್ಟ ದಕ್ಕಿಲ್ಲ. ಹೀಗಾಗಿ ಮುಂದಿನ ಮೇಯರ್ ಸ್ಥಾನವನ್ನು ಆ ಭಾಗಕ್ಕೆ ಕಲ್ಪಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಲಾವಣ್ಯ ಗಣೇಶ್‍ರೆಡ್ಡಿ ಅವರು ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟು ವರಿಷ್ಠರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಇದರ ಜತೆಗೆ ಮೂರು ಬಾರಿ ಕಾಂಗ್ರೆಸ್‍ನವರಿಗೆ ಮೇಯರ್ ಸ್ಥಾನ ಅಲಂಕರಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದೊಂದು ಬಾರಿ ಜೆಡಿಎಸ್ ಸದಸ್ಯರಿಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಎನ್ನುವುದು ಜೆಡಿಎಸ್ ಪಟ್ಟಾಗಿದೆ.
ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ವಿರುದ್ಧ ಮುನಿಸಿಕೊಂಡಿರುವ ನಗರದ ಪ್ರಮುಖ ಮೂವರು ಶಾಸಕರಾದ ಮುನಿರತ್ನ, ಎಸ್.ಟಿ.ಸೋಮಶೇಖರ್ ಹಾಗೂ ಬೈರತಿ ಬಸವರಾಜ ಅವರು ಈ ಬಾರಿ ರಾಮಲಿಂಗಾರೆಡ್ಡಿ ಅವರ ಬೆನ್ನಿಗೆ ನಿಂತಿರುವುದು ವಿಶೇಷ.
ರಾಮಲಿಂಗಾರೆಡ್ಡಿ ಅವರು ಸೂಚಿಸುವ ಅಭ್ಯರ್ಥಿಯನ್ನೇ ಮೇಯರ್ ಆಯ್ಕೆಗೆ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಮೇಯರ್ ಚುನಾವಣೆ ಸಂದರ್ಭದಲ್ಲಿ ನಾವು ವಿದೇಶ ಪ್ರವಾಸ ಕೈಗೊಳ್ಳಬೇಕಾಗುತ್ತದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿರುವುದು ಕಾಂಗ್ರೆಸ್‍ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಹೀಗಾಗಿ ಮುಂದಿನ ಮೇಯರ್ ಆಯ್ಕೆಗೆ ಬಿಗ್‍ಫೈಟ್ ಸೃಷ್ಟಿಯಾಗಿರುವುದನ್ನು ಮನಗಂಡಿರುವ ಸರ್ಕಾರ ಸದ್ದುಗದ್ದಲವಿಲ್ಲದೆ ಮೀಸಲಾತಿ ಬದಲಾವಣೆ ಮಾಡಲು ಮನಸ್ಸು ಮಾಡಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಮೀಸಲಾತಿ ಬದಲಾವಣೆ ಪ್ರಕ್ರಿಯೆಯನ್ನು ಈಗಾಗಲೇ ಕೈಗೆತ್ತಿಕೊಂಡಿರುವ ಸರ್ಕಾರ ಒಂದೆರಡು ದಿನಗಳಲ್ಲಿ ಮೀಸಲಾತಿ ಬದಲಾಯಿಸುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
ಒಂದು ವೇಳೆ ಮೀಸಲಾತಿ ಬದಲಾವಣೆಯಾಗಿ ಬಿಸಿಎಂ ವರ್ಗಕ್ಕೆ ಮೇಯರ್ ಸ್ಥಾನ ದೊರಕುವಂತಾದರೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಮಾಜಿ ನಾಯಕ ರಿಜ್ವಾನ್ ಅಹಮ್ಮದ್ ಅವರ ಹೆಸರುಗಳು ಚಾಲ್ತಿಗೆ ಬರುವ ಸಾಧ್ಯತೆಗಳಿವೆ.