ರಾಜ್ಯದ ಹಲವು ಭಾಗಗಳಲ್ಲಿ ಇಳಿಮುಖವಾದ ಮಳೆ

 

ಬೆಂಗಳೂರು,ಆ.24-ರಾಜ್ಯದ ಮಲೆನಾಡು, ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಇಳಿಮುಖವಾಗಿದ್ದು, ನದಿಗಳ ಪ್ರವಾಹದ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಭಾಗದಲ್ಲೂ ಮಳೆ ಇಳಿಮುಖವಾಗಿದೆ. ಕರಾವಳಿ ಭಾಗದಲ್ಲಿ ಮಳೆ ಮುಂದುವರೆದಿದ್ದರೂ ಭಾರೀ ಮಳೆಯಾಗುತ್ತಿಲ್ಲ. ಸಾಧಾರಣ ಮಳೆ ಮಾತ್ರ ಮುಂದುವರೆದಿದೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ಒಳನಾಡಿನಲ್ಲೂ ಕೂಡ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ. ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ.

ಅರಬ್ಬೀಸಮುದ್ರದಲ್ಲಿ ಭಾರೀ ಮಳೆ ತರುವಂಥ ಯಾವುದೇ ಪ್ರಕ್ರಿಯೆಗಳು ಕಂಡುಬರುತ್ತಿಲ್ಲ. ಸದ್ಯದ ಮಟ್ಟಿಗೆ ವಾಯುಭಾರ ಕುಸಿತ, ಮೇಲ್ಮೈ ಸುಳಿ ಗಾಳಿಯಂತಹ ಲಕ್ಷಣಗಳು ವಾತಾವರಣದಲ್ಲಿ ಕಂಡುಬರುತ್ತಿಲ್ಲ. ಆದರೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇನ್ನೆರಡು ದಿನದಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬಂಗಾಳಕೊಲ್ಲಿ ಉತ್ತರ ಭಾಗದಲ್ಲಿ ಕೇಂದ್ರೀಕೃತವಾಗಿರುವುದರಿಂದ ರಾಜ್ಯದ ಮೇಲೆ ಅದರ ಪರಿಣಾಮವು ಉಂಟಾಗುವ ಸಾಧ್ಯತೆ ವಿರಳ. ಇಂದು ಮತ್ತು ನಾಳೆ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬರಬಹುದು ಎಂದು ಹೇಳಿದರು.
ಹಾರಂಗಿ ಜಲಾಶಯದ ಬಳಿ ತಮ್ಮ ಸಂಸ್ಥೆಯ ಭೂಕಂಪನ ಮಾಪಕವನ್ನು ಈಗಾಗಲೇ ಅಳವಡಿಸಲಾಗಿದೆ. ಕೊಡಗಿನಲ್ಲಿ ಉಂಟಾದ ಅತೀ ಭಾರೀ ಮಳೆ ಹಾಗೂ ಭೂ ಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭೂ ವಿಜ್ಞಾನ ಸಂಶೋಧನಾ ಸಂಸ್ಥೆ(ಎನ್‍ಜಿಆರ್‍ಐ) ಇತ್ತೀಚೆಗೆ ಮತ್ತೊಂದು ಭೂಕಂಪನ ಮಾಪಕವನ್ನು ಅಳವಡಿಸಿದೆ. ಮಡಿಕೇರಿಯ ನವೋದಯ ಶಾಲೆಯ ಬಳಿ ಹೊಸ ಭೂಕಂಪನ ಮಾಪಕವನ್ನು ಅಳವಡಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ