ನವದೆಹಲಿ: ಪ್ರಧಾನಿಯಾದವರು ನಮ್ಮ ದೇಶದ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಚರ್ಚಿಸಬಾರದು. ಆದರೆ ಪ್ರಧಾನಿ ಮೋದಿ ಈ ವಿಷಯವನ್ನು ಮೊದಲಬಾರಿ ಮುರಿದಿದ್ದಾರೆ. ಹಾಗಂತ ಬೇರೆಯವರು ಅವರನ್ನೇ ಅನುಸರಿಸಬೇಕಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯಶವಂತ್ ಸಿನ್ಹಾ, ಜರ್ಮನಿಯ ಹ್ಯಾಮ್ ಬರ್ಗ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣಕ್ಕೆ ಉಲ್ಲೇಖವಾಗಿ ಈ ಹೇಳಿಕೆ ನೀಡಿರುವ ಸಿನ್ಹಾ, ರಾಹುಲ್ ಪ್ರಸ್ತಾಪಿಸಿರುವ ಸಾಮೂಹಿಕ ಹತ್ಯೆ ಮತ್ತು ಅನಾಣ್ಯೀಕರಣದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ನಡೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ನಮ್ಮ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಚರ್ಚಿಸಬಾರದು, ಪ್ರಧಾನಿಯವರು ಈ ನಿಯಮವನ್ನು ಮೊದಲ ಬಾರಿಗೆ ಮುರಿದರು. ಬೇರೆಯವರು ಅವರನ್ನು ಅನುಸರಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಒಮನ್ ನ ರಾಜಧಾನಿ ಮಸ್ಕತ್ ನ ಸುಲ್ತಾನ್ ಖಬೂಸ್ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಾ, ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಲವು ಹಗರಣಗಳನ್ನು ಮಾಡಿ ದೇಶಕ್ಕೆ ಕೆಟ್ಟ ಹೆಸರು ತಂದಿದೆ ಎಂದು ಟೀಕಿಸಿದ್ದರು. ಯಾರೂ ಕೂಡ ನನ್ನ ಸರ್ಕಾರ ಭ್ರಷ್ಟವಾಗಿದೆ ಎಂದು ಟೀಕಿಸಬಾರದು ಎಂದಿದ್ದರು.
ನಂತರ ಅದೇ ವರ್ಷ ಕೆನಡಾದಲ್ಲಿ ಇನ್ನು ಮುಂದೆ ಭಾರತ ಸ್ಕಿಲ್ ಇಂಡಿಯಾ ಎಂದು ಕರೆಯಲ್ಪಡುತ್ತದೆಯೇ ಹೊರತು ಸ್ಕ್ಯಾಮ್ ಇಂಡಿಯಾ ಎಂದಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು.