2050ರ ವೇಳೆಗೆ ಭಾರತದ ಜನಸಂಖ್ಯೆ ಚೀನಾಗಿಂತ ಶೇ. 8 ರಷ್ಟು ಹೆಚ್ಚಳ

ನವದೆಹಲಿ:ಆ-೨೩: ಭಾರತದ ಜನಸಂಖ್ಯೆ 2050ರ ವೇಳೆಗೆ ಚೀನಾಗಿಂತ ಶೇ. 8 ರಷ್ಟು ಹೆಚ್ಚು ಆಗಿರಲಿದ್ದು, ಮಕ್ಕಳ(15 ವರ್ಷಕ್ಕಿಂತ ಕೆಳಗಿನವರ) ಸಂಖ್ಯೆಯು ಈಗ ಇರುವ ಪ್ರಮಾಣಕ್ಕಿಂತ ಶೇ. 20 ರಷ್ಟು ಕಡಿಮೆಯಾಗಲಿದೆ ಎಂದು ತಿಳಿದುಬಂದಿದೆ.

ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಜನಸಂಖ್ಯೆ ಚೀನಾ ಜನಸಂಖ್ಯೆಯನ್ನೂ ಮೀರಲಿದೆ ಎಂದು ವಾಷಿಂಗ್ಟನ್‌ನ ಸ್ವಯಂ ಸೇವಾ ಸಂಸ್ಥೆ ಜನಸಂಖ್ಯೆ ಅವಲೋಕನ ಕೇಂದ್ರ(ಪಿಆರ್‌ಬಿ) ಬಿಡುಗಡೆ ಮಾಡಿರುವ ವಿಶ್ವ ಜನಸಂಖ್ಯಾ ವರದಿ ತಿಳಿಸಿದೆ. ಸದ್ಯ ಭಾರತ ಹಾಗೂ ಚೀನಾ ದೇಶಗಳ ಜನಸಂಖ್ಯೆಯು ಕ್ರಮವಾಗಿ 137 ಹಾಗೂ 139 ಕೋಟಿ ಇದೆ ಎನ್ನಲಾಗಿದೆ.

2030ರ ವೇಳೆಗೆ ದೇಶದ ಜನಸಂಖ್ಯೆ 153 ಹಾಗೂ 2050ರ ವೇಳೆಗೆ 168 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. 2030ರ ವೇಳೆಗೆ ಚೀನಾ ಜನಸಂಖ್ಯೆಯು 142 ಕೋಟಿ ಆಗಿರಲಿದ್ದು, 2050 ಆಗುವುದರೊಳಗೆ 134 ಕೋಟಿಗೆ ಇಳಿಯಲಿದೆ ಎನ್ನಲಾಗಿದೆ.

2050ರ ವೇಳೆಗೆ ವಿಶ್ವ ಜನಸಂಖ್ಯೆ ಬೆಳವಣಿಗೆ ದರ ಶೇ. 29.3 ಇರಲಿದ್ದು, ಭಾರತದ ಪ್ರಮಾಣವು ಶೇ. 22.5 ರಷ್ಟು ಇರಲಿದೆ.

ಸದ್ಯ ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ. 28 ರಷ್ಟು ಮಕ್ಕಳಿದ್ದು, ಈ ಪ್ರಮಾಣವು 2050 ಆಗುವಷ್ಟರಲ್ಲಿ ಶೇ.19ಕ್ಕೆ ಇಳಿಯಲಿದೆ. ಈಗ ಪ್ರತಿ ನಾಲ್ಕು ಜನರಲ್ಲಿ ಒಂದು ಮಗು ಇದೆ. ಜನಸಂಖ್ಯೆ ಬೆಳವಣಿಗೆ ದರ ಹೀಗೆಯೇ ಮುಂದುವರಿದರೆ 2050ರ ವೇಳೆಗೆ ಪ್ರತಿ ಐದು ಜನರಿಗೆ ಒಂದು ಮಗು ಉಳಿಯಲಿದೆ.

ಇನ್ನು ದೇಶದಲ್ಲಿ ವೃದ್ಧರ ಸಂಖ್ಯೆಯೂ ಏರಿಕೆಯಾಗಲಿದೆ. ಸದ್ಯ ವೃದ್ಧರ ಸಂಖ್ಯೆ ಶೇ. 6 ಇದ್ದು, 2050ರ ವೇಳೆಗೆ ಇದು ಶೇ. 13ಕ್ಕೆ ಏರಿಕೆ ಆಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ