ಕೋಲ್ಕತ್ತಾ: ಭಾರೀ ಮಳೆಗೆ ಕೇರಳ ಜನತೆ ತತ್ತರಿಸಿದ್ದಾರೆ. ಅವರ ಸಹಾಯಕ್ಕಾಗಿ ಇಡೀ ದೇಶವೇ ಕೈ ಜೋಡಿಸಿದೆ. ಆದ್ರೆ ಇಲ್ಲೊಂದು ನಾಲ್ಕರ ಪೋರಿ ತಾನು ಕೂಡಿಟ್ಟ ಪ್ಯಾಕೇಟ್ ಮನಿಯನ್ನ ಕೇರಳ ಸಂತ್ರಸ್ತರಿಗೆ ನೀಡಿದ್ದಾಳೆ.
ಹೌದು, ಪಶ್ಚಿಮ ಬಂಗಾಳದ ಜಾದವ್ಪುರ್ನ ನಿವಾಸಿ ಅಪರಜಿತಾ ಸಹಾ (4) ಕೇರಳದ ಜನತೆಯ ಸಂಕಷ್ಟಕ್ಕೆ ಹಸ್ತ ಚಾಚಿದ್ದಾರೆ. ತಾವು ಇದುವರೆಗೆ ಕೂಡಿಟ್ಟ ಹಣವೆಲ್ಲ ಕೇರಳದ ಸಂತ್ರಸ್ತರಿಗೆ ಕೊಡುಗೆ ನೀಡಿದ್ದಾರೆ.
ಪ್ರತಿ ಹುಟ್ಟುಹಬ್ಬದಂದು ಬಂದ ಹಣ ಮತ್ತು ಗಿಫ್ಟ್ಗಳನ್ನು ಅಪರಜಿತಾ ಕೂಡಿಟ್ಟಿದ್ದಳು. ಆ ಕೂಡಿಟ್ಟ ಹಣದಿಂದ ತನ್ನ ಡ್ಯಾನ್ಸ್ ಕಲಿಕೆಗೆ ಸಿಡಿ ಪ್ಲೇಯರ್ನ್ನು ತೆಗೆದುಕೊಳ್ಳಬೇಕೆಂಬ ಆಸೆಯಿತ್ತು. ಆದ್ರೆ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಮಾಧ್ಯಮದಲ್ಲಿ ನೋಡಿದ್ದಾಳೆ. ಇದರಿಂದ ಕೊರಗಿದ ಅಪರಜಿತ ಮನಸ್ಸು ತನ್ನ ಆಸೆಯನ್ನು ಬದಿಗಿಟ್ಟು ಕೂಡಿಟ್ಟ ಹಣವೆಲ್ಲ ನೆರೆ ಸಂತ್ರಸ್ತರಿಗೆ ನೀಡಿದ್ದಾರೆ.
ತನ್ನ ಪೋಷಕರ ಜೊತೆ ನೇರ ಸಿಪಿಐ(ಎಂ) ಕಚೇರಿಗೆ ತೆರಳಿ ನಾಯಕ ಭೀಮನ್ ಬೋಸ್ ಅವರನ್ನು ಭೇಟಿ ಮಾಡಿದ ಅಪರಜಿತಾ `ನನ್ನ ಸಹೋದರಿಗಾಗಿ ನಾನು ಈ ಹಣವನ್ನು ನೀಡುತ್ತಿದ್ದೇನೆ’ ಅಂತಾ ಕೇರಳ ಸಂತ್ರಸ್ತರ ನಿಧಿಗೆ ಹಣವನ್ನು ನೀಡಿದರು. ಬಾಲಕಿಯ ಈ ಕಾರ್ಯಕ್ಕೆ ಸಿಪಿಐ(ಎಂ) ನಾಯಕ ಭೀಮನ್ ಬೋಸ್ ಫಿದಾ ಆಗಿದ್ದಾರೆ.