ಗ್ರಾಮಾಯಣ ಚಿತ್ರಕ್ಕೆ ಉತ್ತಮ ಕಲಾವಿದರ ಆಯ್ಕೆಯಲ್ಲಿ ನಿರ್ದೇಶಕ ದೇವರ್ನೂರು ಚಂದ್ರು ನಿರತರಾಗಿದ್ದಾರೆ. ವಿನಯ್ ರಾಜ್ ಕುಮಾರ್ ನಾಯಕನಾಗಿ ಮತ್ತು ಅಮೃತಾ ಐಯ್ಯರ್ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಹಿರಿಯ ಕಲಾವಿದೆ ಅಪರ್ಣಾ ಕೂಡ ನಟಿಸಲಿದ್ದಾರೆ.ಈ ಮೂಲಕ ಸುಮಾರು 30 ವರ್ಷಗಳ ನಂತರ ಕನ್ನಡ ಸಿನಿಮಾದಲ್ಲಿ ಮತ್ತೆ ಅವರು ಬಣ್ಣ ಹಚ್ಚುತ್ತಿದ್ದಾರೆ.ಗ್ರಾಮಾಯಣದಲ್ಲಿ ತಾಯಿಯ ಪಾತ್ರವನ್ನು ಅವರು ಮಾಡುತ್ತಿದ್ದು, ಅದು ಚಿತ್ರದ ಕೇಂದ್ರಬಿಂದುವಾಗಿದೆ.ಪುಟ್ಟಣ್ಣ ಕಣಗಾಲ್ ಅವರ 1984ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದ ಅಪರ್ಣಾ ನಂತರ 1989ರಲ್ಲಿ ಇನ್ಸ್ ಪೆಕ್ಟರ್ ವಿಕ್ರಮ್, ನಮ್ಮೂರ ರಾಜ ಮತ್ತು ಒಂದಾಗಿ ಬಾಳುವಿನಲ್ಲಿ ನಟಿಸಿದ್ದರು. ನಂತರ ಅಪರ್ಣಾ ಸಿನಿಮಾ ತೊರೆದು ರೇಡಿಯೊ, ಧಾರವಾಹಿಗಳಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಸೃಜನ್ ಲೋಕೇಶ್ ಅವರ ಕಾಮಿಡಿ ರಿಯಾಲಿಟಿ ಶೋ ಮಜಾ ಟಾಕೀಸ್ ನಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.ಗ್ರಾಮಾಯಣದ ಚಿತ್ರೀಕರಣ ಸೆಪ್ಟೆಂಬರ್ 18ರಿಂದ ಆರಂಭವಾಗಲಿದೆ. ಸೆಪ್ಟೆಂಬರ್ 6ರಂದು ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ.ಚಿತ್ರವನ್ನು ಎನ್ ಎಲ್ಎಲ್ ಮೂರ್ತಿ ನಿರ್ಮಿಸುತ್ತಿದ್ದಾರೆ. ನಾಯಕಿ ಅಮೃತಾ ಐಯ್ಯರ್ ಬೆಂಗಳೂರು ಹುಡುಗಿಯಾಗಿದ್ದು ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಓದುತ್ತಿದ್ದಾರೆ. ತಮಿಳಿನಲ್ಲಿ ಕಲ್ಲಿ ಇವರ ಚೊಚ್ಚಲ ಚಿತ್ರ. ನಂತರ ಪಡೈವೀರನ್ ನಲ್ಲಿ ಅಭಿನಯಿಸಿದ್ದರು, ಇದು ಅವರಿಗೆ ಮೂರನೇ ಚಿತ್ರವಾಗಿದ್ದು ಕನ್ನಡದಲ್ಲಿ ಮೊದಲನೆಯದ್ದು.