ಬೆಂಗಳೂರು, ಆ.21-ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಹೊಸ ಮಾರ್ಗೋಪಾಯಗಳನ್ನು ಕಂಡುಕೊಂಡಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಇನ್ನು ಮುಂದೆ ಸರ್ಕಾರಿ ನೌಕರರು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಬೇಕಾಗುತ್ತದೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೊಸ ಶಾಸನವೊಂದನ್ನು ರಚಿಸಲು ತೀರ್ಮಾನಿಸಿದೆ.
ಪ್ರಸ್ತಾಪಿಸ ಶಾಸನದ ಪ್ರಕಾರ ಐಎಎಸ್, ಐಪಿಎಸ್, ಎಎಫ್ಎಸ್, ಕೆÉಎಎಸ್ನಿಂದ ಹಿಡಿದು ಗುಮಾಸ್ತದ ಹಂತದವರೆಗಿನ ಎಲ್ಲಾ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕಾಗುತ್ತದೆ.
ಈಗಾಗಲೇ ಸರ್ಕಾರಿ ನೌಕರರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ನಿಯಮ ಜಾರಿ ಮಾಡಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರಗಿಸಲು ಅವಕಾಶ ನೀಡಲಾಗಿದ್ದು, ಕಳೆದ ವರ್ಷವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಶಾಸನವನ್ನು ಜಾರಿ ಮಾಡಿದ್ದರು.
ಉತ್ತರ ಪ್ರದೇಶದ ಮಾದರಿಯನ್ನೇ ಮಾನದಂಡವಾಗಿಟ್ಟುಕೊಂಡು ಅನೇಕ ರಾಜ್ಯಗಳು ಈ ನಿಯಮಾವಳಿಗಳನ್ನು ರೂಪಿಸಿವೆ. ಪರಿಣಾಮ ವಿಧಿ ಇಲ್ಲದಿದ್ದರೂ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ.
ಶಾಸನ ತರುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ತದನಂತರ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ನಂತರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ.
ಶಾಸನ ರಚಿಸುವ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಮಾತುಕತೆ ನಡೆಸಿದ್ದಾರೆ. ಇದಕ್ಕೆ ಕೃಷ್ಣಬೈರೇಗೌಡ ಒಪ್ಪಿಗೆ ಸೂಚಿಸಿದ್ದು, ಕಾನೂನು ಇಲಾಖೆಗೆ ಅಧಿಕಾರಿಗಳಿಗೆ ಶಾಸನದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದಾರೆ.
ಕಾರಣವೇನು ?
ರಾಜ್ಯದ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಸರ್ಕಾರ ನಿಯಮಾವಳಿ ರೂಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿ ನೀಡಿತ್ತು. ನೌಕರರ ಮಕ್ಕಳು ಕೇವಲ ಖಾಸಗಿ ಶಾಲೆಗಳಿಗೆ ದಾಖಲಾಗುವುದರಿಂದ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ತಾರತಮ್ಯ ಉಂಟಾಗುತ್ತದೆ. ಈ ಅಸಮತೋಲನವನ್ನು ಹೋಗಲಾಡಿಸಬೇಕಾದರೆ ಇದು ಅನಿವಾರ್ಯ ಎಂಬುದು ಪ್ರಾಧಿಕಾರದ ವಾದವಾಗಿದೆ.
ಅಲ್ಲದೆ ಇತ್ತೀಚೆಗೆ ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಅನೇಕ ಕಡೆ ಮುಚ್ಚುವ ಹಂತ ತಲುಪಿದೆ. ಸರ್ಕಾರ ಏನೇ ಜಾದೂ ಮಾಡಿದರೂ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳತ್ತ ತಿರುಗಿ ನೋಡುತ್ತಿಲ್ಲ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಸರ್ಕಾರ ಈ ಮಾರ್ಗೋಪಾಯ ಕಂಡುಕೊಂಡಿದೆ.