ಬೆಂಗಳೂರು,ಆ.20-ರಾಜ್ಯದ ಪ್ರವಾಹಪೀಡಿತ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಶೀಘ್ರದಲ್ಲೇ ಸಮಗ್ರ ವರದಿ ಸಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಕೂಡ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕೆಂದು ಸೂಚಿಸಲಾಗಿದೆ.
ಯಡಿಯೂರಪ್ಪ, ಅನಂತಕುಮಾರ್ ಹಾಗೂ ಸದಾನಂದಗೌಡರಿಗೆ ದೂರವಾಣಿ ಮೂಲಕ ಸೂಚನೆ ನೀಡಿರುವ ನರೇಂದ್ರ ಮೋದಿ ಅವರು ಯಾವ ಯಾವ ಭಾಗದಲ್ಲಿ ಮಳೆ ಹಾನಿಯಿಂದ ಎಷ್ಟೆಷ್ಟು ಹಾನಿಯಾಗಿದೆ, ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಬೆಳೆ, ಮನೆಗಳು, ಜಾನುವಾರು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಬೇಕೆಂದು ಸೂಚಿಸಿದ್ದಾರೆ.
ರಾಜ್ಯದ ಮಡಿಕೇರಿ, ಕರಾವಳಿ ತೀರ ಪ್ರದೇಶ, ಮಲೆನಾಡು ಸೇರಿದಂತೆ ಪ್ರವಾಹ ಪೀಡಿತ ಸ್ಥಳಗಳಿಗೆ ಸಂಸದರು, ಖುದ್ದು ಭೇಟಿ ನೀಡಿ ವರದಿ ನೀಡಬೇಕೆಂದು ಪ್ರಧಾನಿಯವರು ಮನವಿ ಮಾಡಿದ್ದಾರೆ.
ಕೇಂದ್ರದಿಂದ ಕರ್ನಾಟಕಕ್ಕೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಮಳೆಯಿಂದ ಸಾವಿರಾರು ಜನರು ಮನೆ-ಮಠ, ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಲಾಭ-ನಷ್ಟ ನೋಡದೇ ಮಾನವೀಯತೆ ತೋರಿಸಬೇಕೆಂದು ಸಂಸದರಿಗೆ ಕಿವಿ ಮಾತು ಹೇಳಿದ್ದಾರೆ.
ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲ ಸೀತಾರಾಮನ್ ಈಗಾಗಲೇ ಪ್ರವಾಹ ಪೀಡಿತ ಸ್ಥಳಗಳಿಗೆ ವಾಯುಪಡೆ ಹೆಲಿಕಾಪ್ಟರ್, ಸೇನಾಪಡೆ ಸೇರಿದಂತೆ ರಕ್ಷಣಾ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.
ಭಾರೀ ಮಳೆಯಿಂದಾಗಿ ಕೆಲವು ಕಡೆ ಹೆಲಿಕಾಪ್ಟರ್ಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಮಳೆ ತಗ್ಗಿದ ನಂತರ ಇನ್ನು ಹೆಚ್ಚುವರಿ ಹೆಲಿಕಾಪ್ಟರ್ಗಳನ್ನು ಒದಗಿಸಲಾಗುವುದು. ಜನರ ಕಷ್ಟಗಳಿಗೆ ಮೊದಲು ಸ್ಪಂದಿಸುವ ಕೆಲಸ ಮಾಡಬೇಕು.
ಈಗಾಗಲೇ ನಾನು ಖುದ್ದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಅಲ್ಲದೆ ರಕ್ಷಣಾ ತಂಡದವರು ಕೂಡ ಕ್ಷಣ ಕ್ಷಣಕ್ಕೂ ಮಾಹಿತಿ ನೀಡುತ್ತಿದ್ದಾರೆ. ಕರ್ನಾಟಕಕ್ಕೆ ಕೇಂದ್ರವು ಅಗತ್ಯ ಪರಿಹಾರ ನೀಡಲು ಸಿದ್ಧವಿದೆ.
ಮೊದಲು ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳುಅಲ್ಲಿನ ಜನರ ಕಷ್ಟಕಾರ್ಪಣ್ಯಗಳಿಗೆ ಕೈ ಜೋಡಿಸುವಂತೆ ಸೂಚಿಸಿದ್ದಾರೆ.
ಪ್ರಧಾನಿಯವರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ಲೋಕಸಭೆ ಹಾಗೂ ರಾಜ್ಯ ಸಭೆ ಸದಸ್ಯರು, ಶಾಸಕರು ಸೇರಿದಂತೆ ಮತ್ತಿತರರು ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಾಯಸ್ತ ನೀಡಲು ಧಾವಿಸುತ್ತಿದ್ದಾರೆ.