ಬೆಂಗಳೂರು,ಆ.20- ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೊಸದಾಗಿ 15 ಲಕ್ಷ ರೈತರಿಗೆ ಸಾಲ ನೀಡುವ ಉದ್ದೇಶವಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಂಶಪುರ್ ತಿಳಿಸಿದರು.
ಜೆಡಿಎಸ್ ಕಚೇರಿ ಜೆಪಿಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ 15 ಲಕ್ಷ ರೈತರನ್ನು ಸಾಲದ ವ್ಯಾಪ್ತಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕೆಲವು ಜಿಲ್ಲಾ ಸಹಕಾರಿ ಬ್ಯಾಂಕ್‍ಗಳು ಆರ್ಥಿಕವಾಗಿ ಸಮೃದ್ಧವಾಗಿಲ್ಲ. ಹೀಗಾಗಿ ಹಣಕಾಸು ಯೋಜನೆಯನ್ನು ರೂಪಿಸಲಾಗುತ್ತಿದೆ. ಸಹಕಾರಿ ಸಂಘಗಳ ಮೂಲಕ ಈಗಾಗಲೇ 22 ಲಕ್ಷ ರೈತರು ಸಾಲ ಪಡೆದಿದ್ದಾರೆ ಎಂದು ಹೇಳಿದರು.
ಕೊಡಗಿನಲ್ಲಿ ಅತಿವೃಷ್ಟಿಯಿಂದ ಭಾರೀ ಅನಾಹುತ ಉಂಟಾಗಿದ್ದು, ರಾಜ್ಯಾದ್ಯಂತ ಸಹಾಯಹಸ್ತ ನೀಡಲಾಗುತ್ತಿದೆ. ನಾವು ಕೂಡ ಸಾಧ್ಯವಾದಷ್ಟು ನೆರವು ನೀಡುವುದಾಗಿ ತಿಳಿಸಿದರು.
ಸಚಿವರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಸಾರ್ವಜನಿಕರು ಬರುವುದು ಕಷ್ಟವಾಗಿರುವುದರಿಂದ ಪ್ರತಿದಿನ ಸಚಿವರು ಜೆಪಿಭವನದಲ್ಲಿ ಜನರಿಗೆ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ ಸಾಕಷ್ಟು ಒಳ್ಳೆಯದಾಗಿದೆ. ಇದು ಉತ್ತಮ ಕೆಲಸವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡರಾದ ಸುರೇಶ್ ಬಾಬು, ಆರ್.ಪ್ರಕಾಶ್ ಉಪಸ್ಥಿತರಿದ್ದರು.