ಇಸ್ಲಾಮಾಬಾದ್ : ಆ.19- ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ 21 ಸದಸ್ಯರನ್ನು ಒಳಗೊಂಡ ತಮ್ಮ ಸಚಿವ ಸಂಪುಟವನ್ನು ಪ್ರಕಟಿಸಿದ್ದಾರೆ.
ಪಾಕಿಸ್ತಾನ ಮಾಜಿ ಸೇನಾ ಸರ್ವಾಧಿಕಾರಿ ಮತ್ತು ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಆಡಳಿತದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದವರೂ ಸಹ ಇಮ್ರಾನ್ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿದ್ದಾರೆ.
ಖಾನ್ ಪ್ರಕಟಿಸಿದ 21 ನೂತನ ಸಂಪುಟ ಸದಸ್ಯರಲ್ಲಿ 16 ಮಂದಿ ಸಚಿವರಾಗಲಿದ್ದಾರೆ, ಉಳಿದ ಐವರು ಸಂಪುಟ ದರ್ಜೆಯ ಮಂತ್ರಿಗಳ ಸ್ಥಾನಮಾನದೊಂದಿಗೆ ಪ್ರಧಾನಮಂತ್ರಿಯವರ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ವಕ್ತಾರ ಫವದ್ ಚೌಧರಿ ತಿಳಿಸಿದ್ಧಾರೆ.
ಹೊಸ ಪಟ್ಟಿಯಂತೆ, ಪಕ್ಷದ ಉಪಾಧ್ಯಕ್ಷ ಶಾ ಮಹಮದ್ ಖುರೇಷಿ ವಿದೇಶಾಂಗ ಸಚಿವರಾಗಿದ್ದರೆ, ಪರ್ವೇಜ್ ಖಟ್ಟಕ್ ರಕ್ಷಣೆ ಹಾಗೂ ಅಸಾದ್ ಉಮೆರ್ ಹಣಕಾಸು ಮಂತ್ರಿಗಳಾಗಿದ್ದಾರೆ.
ರಾಷ್ಟ್ರಾಧ್ಯಕ್ಷರ ಭವನದಲ್ಲಿ ನಾಳೆ ನಡೆಯಲಿರುವ ಸಮಾರಂಭದಲ್ಲಿ ಹೊಸ ಸಂಪುಟ ಪ್ರಮಾಣ ವಚನ ಸ್ವೀಕರಿಸಲಿದೆ.