ತಿರುವನಂತಪುರಂ, ಆ.19- ದೇವರ ನಾಡು ಕೇರಳದಲ್ಲಿ ಶತಮಾನದಲ್ಲೇ ಕಂಡು ಕೇರಳರಿಯ ಜಲಪ್ರಳಯದಿಂದ ಸತ್ತವರ ಸಂಖ್ಯೆ 400ಕ್ಕೇರಿದೆ. ಕರಾವಳಿ ರಾಜ್ಯ ನಿರಂತರ ಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ನರಕ ಸದೃಶವಾಗಿವೆ.
ಕೆಲವೆಡೆ ಪ್ರವಾಹ ಪರಿಸ್ಥಿತಿ ಕೊಂಚ ಮಟ್ಟಿಗೆ ತಗ್ಗಿದ್ದರೂ, ಜನರ ಸ್ಥಿತಿ ಶೋಚನೀಯವಾಗಿದೆ. ಪ್ರವಾಹದ ನೀರಿನಲ್ಲಿ ಮೃತದೇಹಗಳು ತೇಲುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ಕೇರಳದ 14 ಜಿಲ್ಲೆಗಳಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆ, ಪ್ರವಾಹ ಹಾಗೂ ಭೂಕುಸಿತಗಳಿಂದ ಈವರೆಗೆ 400ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 2.25 ಲಕ್ಷಕ್ಕೂ ಹೆಚ್ಚು ಮಂದಿ 140ಕ್ಕೂ ಅಧಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ರಾಜ್ಯದಲ್ಲಿರುವ ಬಹುತೇಕ ಎಲ್ಲ ನದಿಗಳು ಮತ್ತು ಉಪ ನದಿಗಳು ಅಪಾಯ ಮಟ್ಟ ಮೀರಿ ಭೋರ್ಗರೆಯುತ್ತಿವೆ. 80 ಅಣೆಕಟ್ಟುಗಳ ಎಲ್ಲ ಗೇಟ್ಗಳನ್ನು ತೆರೆಯಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಪಾಯದಲ್ಲಿ ಸಿಲುಕಿದ್ದ 1,00,000 ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಸಂತ್ರಸ್ತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ರಾಷ್ಟೀಯ ವಿಪತ್ತು ಸ್ಪಂದನೆ ಪಡೆಗಳು(ಎನ್ಡಿಎಸ್ಎಫ್) ಹಗಲು ರಾತ್ರಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಹೆಲಿಕಾಪ್ಟರ್ಗಳು, ಲೈಫ್ ಬೋಟ್ಗಳನ್ನು ಜನರ ರಕ್ಷಣೆಗೆ ಬಳಲಾಗುತ್ತಿದೆ.