ಬೆಂಗಳೂರು,ಆ.19-ಭಾರೀ ಮಳೆ ಹಾಗೂ ಭೂ ಕುಸಿತದಂತಹ ಕಾರಣದಿಂದಾಗಿ ರದ್ದುಪಡಿಸಲಾಗಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸೇವೆಯನ್ನು ಕೇರಳ ಹಾಗೂ ಮಡಿಕೇರಿಗೆ ಮತ್ತೆ ಆರಂಭಿಸಲಾಗಿದೆ.
ಕೇರಳದ ಯರ್ನಾಕುಲಂ, ಕೊಟ್ಟಾಯಂ, ತ್ರಿಶೂರ್, ಪಾಲ್ಗಾಟ್, ಕಾಲಿಕಟ್, ಕಣ್ಣನೂರ್ ಮತ್ತು ತ್ರಿವೇಂಡ್ರಮ್‍ಗೆ ಬಸ್‍ಗಳ ಸೇವೆ ಪುನರಾರಂಭಗೊಂಡಿದ್ದು, ಕಾಸರಗೋಡಿಗೆ ಮಾತ್ರ ಸೇವೆ ಒದಗಿಸಲಾಗುತ್ತಿಲ್ಲ.
ಮೊದಲ ಸಂಚಾರ ತ್ರಿವೇಂಡ್ರಮ್‍ನಿಂದ ಬೆಂಗಳೂರಿಗೆ 4 ಗಂಟೆಗೆ ಆರಂಭವಾಗಲಿದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.
ರಾಜ್ಯದ ಮಡಿಕೇರಿ ಮತ್ತು ಕುಶಾಲನಗರಕ್ಕೂ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವನ್ನು ಆರಂಭಿಸಲಾಗಿದೆ. ಸ್ವಲ್ಪ ಮಟ್ಟಿನ ಮಳೆ ತಗ್ಗಿದ್ದು, ರಸ್ತೆಯಲ್ಲಿ ಬಸ್‍ಗಳು ಸಂಚರಿಸಲು ಅನುವಾಗಿರುವ ಹಿನ್ನೆಲೆಯಲ್ಲಿ ಸೇವೆ ಆರಂಭಿಸಲಾಗಿದೆ.
ಭೂಕುಸಿತ ಮತ್ತಿತರ ಸಮಸ್ಯೆಯಿಂದಾಗಿ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಸ್ಥಳೀಯರ ಅನುಕೂಲಕ್ಕಾಗಿ ಹಾಗೂ ತೊಂದರೆಗೊಳಗಾದವರನ್ನು ಕರೆತರಲು ಸಂಸ್ಥೆ ತುರ್ತು ಸ್ಪಂದನ ದಳ ರಚಿಸಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸಿಲುಕಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಆಯಾ ಘಟಕ ವ್ಯಾಪ್ತಿಯ ಎರಡು ವಾಹನಗಳನ್ನು ನಿಯೋಜಿಸಿತ್ತು.
ಇದಲ್ಲದೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಲು ಜಿಲ್ಲಾಡಳಿತದ ಸಹಯೋಗದೊಂದಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಕಾರ್ಯದಲ್ಲಿ ಯೋಧರ ಸಂಚಾರಕ್ಕೂ ಬಸ್ ಸೇವೆ ನೀಡಲಾಗುತ್ತಿದ್ದು, ಕೆಎಸ್‍ಆರ್‍ಟಿಸಿ ನಿಯಂತ್ರಣ ಕೊಠಡಿ ಮೊಬೈಲ್ ಸಂಖ್ಯೆ 7760990100, 7760990560 ( 24 ಗಂಟೆ ಸೇವೆ).