ಮಹದಾಯಿ ನ್ಯಾಯಾಧೀಕರಣದ ತೀರ್ಪುನಿಂದ ರಾಜ್ಯಕ್ಕೆ ಅನ್ಯಾಯ: ಮೇಲ್ಮನವಿ ಸಲ್ಲಿಸಲು ಜಲಸಂಪನ್ಮೂಲ ಸಚಿವರ ನಿರ್ಧಾರ

 

ಬೆಂಗಳೂರು,ಆ.18- ನಮ್ಮ ನೀರು ನಮ್ಮ ಹಕ್ಕು. ಇದು ನಮ್ಮ ಬದ್ಧತೆ. ಮಹದಾಯಿ ನ್ಯಾಯಾಧೀಕರಣದ ತೀರ್ಪುನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಾಧೀಕರಣ ಕರ್ನಾಟದ ಪಾಲಿನ ನೀರನ್ನು ನ್ಯಾಯಯುತವಾಗಿ ಹಂಚಿಕೆ ಮಾಡಿಲ್ಲ. ನಾವು ಒಟ್ಟು 34 ಟಿಎಂಸಿ ನೀರನ್ನು ಕೇಳಿದ್ದೆವು. ಅದರಲ್ಲಿ 15 ಟಿಎಂಸಿ ವಿದ್ಯುತ್ ಉತ್ಪಾದನೆಗೆ ಬೇಕಾಗುತ್ತಿತ್ತು. ಆ ನೀರು ಗೋವಾ ರಾಜ್ಯಕ್ಕೆ ಹರಿದು ಹೋಗುವುದಿತ್ತು. ಆದರೆ ನ್ಯಾಯಾಧೀಕರಣ ನಮಗೆ ಕೇವಲ 3.9 ಟಿಎಂಸಿ ಹಂಚಿಕೆ ಮಾಡಿದೆ. ಉಳಿದ 1.5 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಹಂಚಿಕೆ ಮಾಡಿದೆ.
ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆ ನಮಗೆ ಸಾಕಷ್ಟು ನೀರಿನ ಹಂಚಿಕೆ ಮಾಡಿಲ್ಲ. ಇದರಿಂದ ಅನ್ಯಾಯವಾಗಿದೆ. ಈ ನಡುವೆ ಗೋವಾ, ಕರ್ನಾಟಕ ಈಗಾಗಲೇ ಕೆಲವು ತಕರಾರುಗಳನ್ನು ತೆಗೆಯಲಾರಂಭಿಸಿದೆ. ಕರ್ನಾಟಕ ಯಾವುದೇ ಯೋಜನೆಗಳನ್ನು ಪ್ರಾರಂಭಿಸಿದರೂ ಗೋವಾ ಅಡ್ಡಿ ಪಡಿಸಲು ಆರಂಭಿಸುತ್ತದೆ.

ನಮಗೆ ನಮ್ಮ ನೀರು, ನಮ್ಮ ಆದ್ಯತೆ ಅಷ್ಟೆಕ್ಕೆ ಒತ್ತು ಕೊಡುತ್ತಿದ್ದೇವೆ. ಬೇರೆಯವರಿಗೆ ಏನು ಕೊಟ್ಟಿದ್ದಾರೆ ಎಂಬುದು ನಮಗೆಮುಖ್ಯವಲ್ಲ. ನಮಗೆ ನಮ್ಮ ಪಾಲು ಸಿಗಬೇಕು. ಈ ನಿಟ್ಟಿನಲ್ಲಿ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವ ವಿಚಾರವಾಗಿ ಸುಪ್ರೀಂಕೋರ್ಟ್‍ಗೆ ಅಥವಾ ನ್ಯಾಯಾಧೀಕರಣದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೋ ಎಂಬ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ವರುಣನ ಕೃಪೆಯಿಂದ ರಾಜ್ಯದಲ್ಲಿ ನದಿ, ಹಳ್ಳಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ಕೆಆರ್‍ಎಸ್, ಹಾರಂಗಿ, ಆಲಮಟ್ಟಿ, ಕಬಿನಿ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯಗಳ ರಕ್ಷಣೆ ದೃಷ್ಟಿಯಿಂದ ಹೊರ ಹರಿವನ್ನು ಹೆಚ್ಚಿಸಲಾಗಿದೆ.
ಮುಂಜಾಗ್ರತ ಕ್ರಮವಾಗಿ ಅಧಿಕಾರಿಗಳು ಜಲಾಶಯಗಳ ಬಗ್ಗೆ ಪೆಟ್ರೋಲಿಂಗ್ (ಗಸ್ತು) ನಡೆಸುತ್ತಿದ್ದಾರೆ. ಸಾರ್ವಜನಿಕರ ಸಂಚಾರವನ್ನು ನಿಷೇಧಿಸಲಾಗಿದೆ. ಮಳೆಯಿಂದಾಗಿ ರಸ್ತೆ, ಸೇತುವೆಗಳು ಹಾಳಾಗಿವೆ. ತಮ್ಮ ಆರ್ಥಿಕ ಇತಿಮಿತಿಯಲ್ಲಿ ಅವುಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಇದೇ ತಿಂಗಳ 20ರಂದು ನವದೆಹಲಿಯಲ್ಲಿ ಅಂತಾರಾಜ್ಯ ನದಿ ನೀರು ಹಂಚಿಕೆ ವಿಷಯವಾಗಿ ಎಲ್ಲ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ಕರೆದಿದ್ದಾರೆ. ಅದರಲ್ಲಿ ತಾವು ಭಾಗಹಿಸುತ್ತಿರುವುದಾಗಿ ಸಚಿವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ