ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಮತ್ತು ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ದೇಶದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದ್ದು, ಗಣ್ಯಾತಿ ಗಣ್ಯರು ಅವರ ಅಂತಿ ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ.
ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್ ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ವೇಳೆ ಬಂಧು ಮಿತ್ರರು ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಬಿಜೆಪಿ ಮುಖಂಡ ಹಾಗೂ ವಾಜಪೇಯಿ ಅವರ ಆಪ್ತ ಎಲ್ ಕೆ ಅಡ್ವಾಣಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದಿದ್ದಾರೆ.
ಅಷ್ಟೇ ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಯೋಗ ಗುರು ಬಾಬಾ ರಾಮ್ ದೇವ್ ಸೇರಿದಂತೆ ಇನ್ನು ಅನೇಕ ಗಣ್ಯರು ಅಟಲ್ ಬಿಹಾರಿ ವಾಜಪೇಯಿಗೆ ಮಾಲಾರ್ಪಣೆ ಸಮರ್ಪಿಸಿ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.
ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.